ಕೊಪ್ಪಳಕ್ಕೆ ಗುರುವಾರ ಬಂದ ರಸಗೊಬ್ಬರ ಅನ್ಲೋಡ್ ಮಾಡುತ್ತಿರುವುದು.
ಕೊಪ್ಪಳ : ಮಳೆಗಾಲ ಆರಂಭವಾಗಿದ್ದು ಕೃಷಿ ಚಟುವಟಿಕೆ ಚುರುಕು ಪಡೆದಿವೆ. ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು ಹಂತ ಹಂತವಾಗಿ ಜಿಲ್ಲೆಗೆ ಪೂರೈಕೆ ಆಗುತ್ತಿದೆ. ಗುರುವಾರ 430 ಟನ್ ಯೂರಿಯಾ, 830 ಟನ್ ಕಾಂಪ್ಲೆಕ್ಸ್ ಗೊಬ್ಬರ ಪೂರೈಕೆಯಾಯಿತು.
ದಿನ ಕಳೆದಂತೆ ಬೇಡಿಕೆ ಹೆಚ್ಚಿದ್ದು ರೈತರು ಅಂಗಡಿಗಳ ಮುಂದೆ ಸರತಿ ನಿಲ್ಲುವುದು, ದಾಖಲೆ, ಚಪ್ಪಲಿ, ಕಲ್ಲು ಇಟ್ಟು ಕಾಯುವುದು ನಡೆಯುತ್ತಿದೆ. ಬೇಡಿಕೆಯಂತೆ ಸಕಾಲಕ್ಕೆ ಗೊಬ್ಬರ ಪೂರೈಕೆ ಆಗದಿರುವುದು ಸಮಸ್ಯೆ ಹೆಚ್ಚಿಸುತ್ತಿದೆ. ರಾಷ್ಟ್ರೀಯ ಕೆಮಿಕಲ್ ಫರ್ಟಿಲೈಸರ್ ನಿಂದ ಗುರುವಾರ 1260 ಟನ್ ಗೊಬ್ಬರ ಬಂದಿತು. ಎಲ್ಲ ಸೊಸೈಟಿಗಳಿಗೆ ಕಳಿಸಲಾಯಿತು. ಕೊಪ್ಪಳ ತಾಲೂಕಿನಲ್ಲಿ 1500 ಟನ್ ಹಾಗೂ ಗಂಗಾವತಿಯಲ್ಲಿ 1000 ಟನ್ ಯೂರಿಯಾ ಇದೆ. ಈವರೆಗೆ 60 ಸೊಸೈಟಿಗಳಿಗೆ 22 ಸಾವಿರ ಟನ್ ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ. ಜೂ.15ಕ್ಕೆ ಒಂದು ಸಾವಿರ ಟನ್ ಯೂರಿಯಾ ಬರಲಿದೆ ಎಂದ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.