ಕೊಪ್ಪಳ ಹೊರವಲಯದ ಬಿಎಸ್​ಪಿಎಲ್​ ಕಾರ್ಖಾನೆ ಮುಖ್ಯದ್ವಾರ ಮುರಿದು ಒಳನುಗ್ಗಿದ ರೈತರು.  
ಕೊಪ್ಪಳ

ಬಿಎಸ್​ಪಿಎಲ್​ ಗೇಟ್​ ಕಿತ್ತೆಸೆದ ರೈತರು

ಪ್ರಮುಖ ಮುಖ್ಯಾಂಶಗಳು

  • ಕಂಪನಿ ಆರಂಭಕ್ಕೆ ತ್ರೀವ್ರ ವಿರೋಧ
ಕೊಪ್ಪಳ : ತಾಲೂಕಿನ ಬಸಾಪುರ ಕೆರೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಆಗ್ರಹಿಸಿ ಇಷ್ಟು ದಿನ ಶಾಂತಿಯುತ ಪ್ರತಿಭಟನೆ ನಡೆಸಿದ ಸಾವಿರಾರು ರೈತರು ಮಂಗಳವಾರ ಬಿಎಸ್​ಪಿಎಲ್​ ತಡೆಗೋಡೆ ಮುರಿದು ಒಳನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಹುತಾತ್ಮ ದಿನಾಚರಣೆ ಅಂಗವಾಗಿ ನಡೆದ ಸಮಾವೇಶದಲ್ಲಿ ಕಾರ್ಖಾನೆ ವಿರುದ್ಧ ರ್ನಿಣಯ ಮಂಡಿಸಿ ಹೋರಾಟ ತೀವ್ರಗೊಳಿಸಿದರು.
54 ಸಾವಿರ ಕೋಟಿ ರೂ.ನಲ್ಲಿ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದ್ದನ್ನು ಖಂಡಿಸಿ ಕಳೆದ 300 ದಿನಗಳಿಂದ ಹೋರಾಟ ನಡೆಯುತ್ತಿದೆ. ಕಂಪನಿ ವಶಕ್ಕೆ ಪಡೆದಿರುವ ಬಸಾಪುರ ಕೆರೆ ಸಾರ್ವಜನಿಕ ಬಳಕೆಗೆ ನೀಡಲು ಕಾರ್ಖಾನೆ ಮುಂದೆಯೇ ನಿತರಂತರ ಧರಣಿ ನಡೆಸಿದ ಅನ್ನದಾತರು, ರೈತ ಹುತಾತ್ಮ ದಿನ ಆಚರಿಸಿದರು. ರಾಜ್ಯ ರೈತ ಸಂದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿ ಪ್ರಮುಖರೆಲ್ಲರ ಸಮ್ಮುಖದಲ್ಲಿ 21 ಪ್ರಮುಖ ರ್ನಿಣಯ ಮಂಡಿಸಿದರು.
ಇಟಗಿಯ ಭೂಕೈಲಾಸ ಮೇಲು ಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿ ಸಮ್ಮುಖದಲ್ಲಿ ಪೊಲೀಸರನ್ನು ಲೆಕ್ಕಿಸದೆ ಬಿಎಸ್​ಪಿಲ್​ ಮುಖ್ಯ ದ್ವಾರ ಹಾಗೂ ತಡೆಗೋಡೆ ಮುರಿದು ಒಳ ಪ್ರವೇಶಿಸಿದರು. ಕೆರೆ ಬಳಿ ತೆರಳಿ ನಮ್ಮ ಕೆರೆ ನಮ್ಮ ಹಕ್ಕು ಎಂದು ಘೋಷಣೆ ಹಾಕಿದರು. ಬಳ್ಳಾರಿ ಐಜಿಪಿ ಡಾ.ಪಿ.ಎಸ್​.ಹರ್ಷ, ಎಸ್ಪಿಗಳಾದ ಜಾಹ್ನವಿ, ಡಾ.ರಾಮ್​ ಎಲ್​.ಅರಸಿದ್ದಿ ಸೇರಿ ಇತರ ಪೊಲೀಸರು ತಡೆಯಲೆತ್ನಿಸಿದರೂ ರೈತರು ಜಗ್ಗಲಿಲ್ಲ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.