ಕೊಪ್ಪಳದಲ್ಲಿ ಸೋಮವಾರ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ನವೀಕರಿಸಬಹುದಾದ ಇಂಧನ ನೀತಿ ಯೋಜನೆಗಳ ಕುರಿತು ಸಭೆ ನಡೆಯಿತು. ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್​, ಸಂಸದ ರಾಜಶೇಖರ ಹಿಟ್ನಾಳ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ ಇದ್ದರು.  
ಕೊಪ್ಪಳ

ರೈತರಿಗೆ ಸಮಸ್ಯೆ ಆಗದಿರಲಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಶಿವರಾಜ ತಂಗಡಗಿ ಸೂಚನೆ
  • ನವೀಕರಿಸಬಹುದಾದ ಇಂಧನ ನೀತಿ ಸಭೆ
ಕೊಪ್ಪಳ : ನವೀಕರಿಸಬಹುದಾದ ಇಂಧನ ನೀತಿ ಯೋಜನೆಗಳ ಜಾರಿ ವೇಳೆ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಕಂಪನಿಗಳು ಅನ್ನದಾತರಿಗೆ ಸ್ಪಂದಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನವೀಕರಿಸಬಹುದಾದ ಇಂಧನ ನೀತಿ ಯೋಜನೆಗಳ ಕುರಿತು ಅಧಿಕಾರಿಗಳು, ಕಂಪನಿ ಪ್ರತಿನೀಧಿಗಳ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳಲ್ಲಿ ಪವನ ಫ್ಯಾನ್ ಹೊತ್ತ ಭಾರಿ ವಾಹನಗಳ ಓಡಾಟದಿಂದ ರಸ್ತೆ ಹಾಳಾಗುತ್ತಿವೆ. ರೈತರಿಗೂ ಸಮಸ್ಯೆಯಾಗುತ್ತಿದೆ. ಸಂಬಂಧಿಸಿದ ಕಂಪನಿಗಳು ಕೃಷಿಕರಿಗೆ ಸ್ಪಂದಿಸುತ್ತಿಲ್ಲವೆಂಬ ದೂರುಗಳಿವೆ. ಇನ್ನು ಮುಂದೆ ಇಂಥ ಟನೆ ನಡೆಯುವಂತಿಲ್ಲ. ಪವನ ವಿದ್ಯುತ್​ ಉತ್ಪಾದನ ಪ್ರೋತ್ಸಾಹಿಸಬೇಕು. ಹಾಗೆಂದು ಮನಸ್ಸಿಗೆ ಬಂದಂತೆ ಅನುಷ್ಠಾನ ಮಾಡುವುದಲ್ಲ. ಜನರಿಗೆ ಸಮಸ್ಯೆ ಆದರೆ ಅವರು ಬರುವುದು ನಮ್ಮ ಬಳಿ. ನಿಮ್ಮ ಹತ್ತಿರವಲ್ಲ ಎಂದು ಗರಂ ಆದರು.
ಎಷ್ಟು ್ಯಾನ್​ ಅಳವಡಿಕೆಗೆ ಅನುಮತಿ ಸಿಕ್ಕಿದೆ, ಎಷ್ಟು ಅಳವಡಿಕೆ ಮಾಡುತ್ತೀರಿ ಎಂಬ ಮಾಹಿತಿ ನೀಡಿ. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್​, ತಾಪಂ ಇಒ, ಪಿಡಬ್ಲೂಡಿ, ಪಿಆರ್​ಇಡಿ, ಪೊಲೀಸ್​, ಜೆಸ್ಕಾಂ, ಅರಣ್ಯ ಸೇರಿ ಇತರ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮತಿ ರಚಿಸಿ. ಸಮಿತಿ ಕಂಪನಿ ಪಡೆದ ಅನುಮತಿ ಪರಿಶೀಲಿಸಲಿ. ಸಿಎಸ್​ಆರ್​ ಅನುದಾನದಲ್ಲಿ ಹಾಳಾದ ಎಷ್ಟು ರಸ್ತೆ ಮರು ನಿರ್ಮಿಸಿದ್ದಾರೆಂದು ಮಾಹಿತಿ ಪಡೆಯಿರಿ. ಇನ್ನೊಂದು ಸಭೆ ಕರೆಯಲಿದ್ದು, ಅಷ್ಟರೊಳಗೆ ಎಲ್ಲ ಮಾಹಿತಿ ಸಂಗ್ರಹಿಸಿ. ರೈತರ ದೂರು ಎಲ್ಲಿವೆ ಎಂದು ತಿಳಿಯಿರಿ. ಕಂಪನಿ ಪ್ರತಿನಿಧಿಗಳು ಸಮಗ್ರ ಮಾಹಿತಿಯೊಂದಿಗೆ ಮುಂದಿನ ಸಭೆಗೆ ಬನ್ನಿ ಎಂದು ತಾಕೀತು ಮಾಡಿದರು.
ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್​ ಮಾತನಾಡಿ, ವಿಂಡ್​ ಪವರ್​ ಕಂಪನಿ ವಾಹನಗಳ ಓಡಾಟದಿಂದ ಸಾಕಷ್ಟು ರಸ್ತೆ ಹಾಳಾಗಿವೆ. ಅಂಬುಲೆನ್ಸ್​ ಓಡಾಡಲು ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ. ಜಮೀನಿನಲ್ಲಿ ಓಡಾಡುವುದರಿಂದ ಧೂಳಿಗೆ ಬೆಳೆ ಹಾಳಾಗುತ್ತಿವೆ. ನಾಗರಾಳ ಗ್ರಾಮದಲ್ಲಿ ಇದೇ ವಿಷಯಕ್ಕೆ ಗಲಾಟೆ ಆಗಿದೆ. ಎಷ್ಟು ್ಯಾನ್​ ಅಳವಡಿಸುತ್ತೀರಿ ಎಂದು ಮಾಹಿತಿ ಬೇಕು. ಅಧಿವೇಶನದಲ್ಲೂ ಈ ಬಗ್ಗೆ ಚರ್ಚಿಸುವೆ ಎಂದು ಕಿಡಿಕಾರಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ವಿಂಡ್​ ಎನರ್ಜಿಗೆ 5,400 ಎಕರೆ ಜಮೀನು ಹೋಗುತ್ತದೆ. ಮುಂದೆ ಇದರ ಪರಿಣಾಮ ಏನಾಗಲಿದೆ ಎಂದು ವಿಚಾರ ಮಾಡಬೇಕು. ಕಂಪನಿ ಷರತ್ತುಗಳು ಏನಿವೆ ಎಂದು ತಿಳಿಸಲಿ. ಇತ್ತೀಚೆಗೆ ಕವಲೂರಿನಲ್ಲಿ ಇದೇ ವಿಷಯಕ್ಕೆ ಗಲಾಟೆ ನಡೆಯಿತು. ರೈತರು ಬಂದು ಜಗಳ ಮಾಡಿದರು. ಅವರ ಸಮಸ್ಯೆಗಳಿಗೆ ಕಂಪನಿಗಳು ಯಾಕೆ ತಾವು ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರ ಹೊಲ ಮತ್ತು ರಸ್ತೆಗಳು ಹಾಳಾಗುತ್ತಿವೆ. ಸಿಎಸ್​ಆರ್​ ಅನುದಾನದಲ್ಲಿ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕೆಂದು ನಿರ್ದೇಶಿಸಿದರು.
ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ವಿಂಡ್​ ಎನರ್ಜಿ ಕಂಪನಿಗಳ ಮುಖ್ಯಸ್ಥರು/ವ್ಯವಸ್ಥಾಪಕರು ಇತರ ಅಧಿಕಾರಿಗಳಿದ್ದರು.