ತುಂಗಭದ್ರಾ ಜಲಾಶಯದಿಂದ ನದಿ ಹಾಗೂ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ರೈತರು ಮತ್ತು ಸಾರ್ವಜನಿಕರು ಮುನಿರಾಬಾದ್ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯಅಭಿಯಂತರ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. 
ಕೊಪ್ಪಳ

ನದಿ-ನಾಲೆಗಳಿಗೆ ನೀರು ಹರಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಮುನಿರಾಬಾದ್ ನೀರಾವರಿ ನಿಗಮ ಕಚೇರಿ ಮುಂದೆ ರೈತರ ಪ್ರತಿಭಟನೆ
ಮುನಿರಾಬಾದ್: ತುಂಗಭದ್ರಾ ಜಲಾಶಯದಿಂದ ತಕ್ಷಣವೇ ನದಿ ಹಾಗೂ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ವಿಜಯನಗರ, ಕಂಪ್ಲಿ, ಸಿರಗುಪ್ಪ, ಗಂಗಾವತಿ ತಾಲೂಕಿನ ರೈತರು ಮತ್ತು ಸಾರ್ವಜನಿಕರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಅಭಿಯಂತರರ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಸುತ್ತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಹಲವೆಡೆ ನಿಂತ ಬೆಳೆಗಳು ಒಣಗುತ್ತಿವೆ. ಆದ್ದರಿಂದ ನದಿ ಮತ್ತು ನಾಲೆಗಳಿಗೆ ನೀರು ಹರಿಸಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನೀರಾವರಿ ನಿಗಮದ ಮುಖ್ಯಅಭಿಯಂತರ ಮನೋಜಕುಮಾರ್ ಬೆಳವಾಡಿ ಮತ್ತು ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರ ಎಸ್.ಬಿ.ಮಲ್ಲಿಗೆವಾಡ ಅವರು ರೈತರ ಅಹವಾಲು ಸ್ವೀಕರಿಸಿ, ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ನೀರು ಹರಿಸಲು ಕ್ರಮವಹಿಸುವ ಭರವಸೆ ನೀಡಿದರು.
ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ರೂಪಿಸುವುದಾಗಿ ರೈತ ಸಂಘಟನೆಯ ಮುಖಂಡರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಬಿ.ವಿ.ಗೌಡ, ಸಂಘದ ಅಧ್ಯಕ್ಷ ಎಸ್.ಖಾದ್ರಿ, ಪ್ರಮುಖರಾದ ಶರಣಪ್ಪ ಗೌಡ, ಮೂಕಯ್ಯ ಸ್ವಾಮಿ, ವೆಂಕಟರಮಣ, ರಾಜು, ವೆಂಕನಗೌಡ, ರವಿ, ಎಂ.ಪ್ರಕಾಶ್, ದೊಡ್ಡನ ಗೌಡ, ಅಂಬರೀಶ, ರತ್ನಮ್ಮ, ಲಕ್ಷ್ಮೀ ಇತರರಿದ್ದರು.