ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ಗಂಗಾವತಿ ತಾಲೂಕಿನ ಪಂಪಾಸರೋವರದಲ್ಲಿ ಆಯೋಜಿಸಿದ್ದ ರೈತರ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ಮಾತನಾಡಿದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷರಾದ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಇತರರಿದ್ದರು. 
ಕೊಪ್ಪಳ

ನೀರಿಗಾಗಿ ಬೃಹತ್ ಪ್ರತಿಭಟನಾ ರ‌್ಯಾಲಿ 31ಕ್ಕೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಅಂಜನಾದ್ರಿಯಿಂದ ಆರಂಭ
  • ಕಾಲುವೆಗೆ ಹರಿಸುವವರೆಗೂ ಕಾಡಾ ಕಚೇರಿ ಮುಂದೆ ಧರಣಿ
  • ರೈತರ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಗಂಗಾವತಿ: ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲುವೆಗೆ ನೀರು ಹರಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದ್ದು, ಜು.31ರಂದು ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ವಿಜಯನಗರ ಕಾಲುವೆಗಳಿಗೆ ಜಲಾಶಯದ ನೀರು ಹರಿಸುವ ನಿಟ್ಟಿನಲ್ಲಿ ತಾಲೂಕಿನ ಪಂಪಾಸರೋವರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತುಂಗಭದ್ರಾದ 0(ಜೀರೋ) ದಿಂದ 11ಎ ವಿತರಣೆ ಕಾಲುವೆಗೆ ಬಚಾವತ್ ಕಾಯ್ದೆ ಅನ್ವಯ 11 ತಿಂಗಳು ನೀರು ಹರಿಸಬೇಕಿದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರಿದ್ದಾಗಲೂ ಬಿಜೆಪಿ ಆಡಳಿತಾವಧಿಯಲ್ಲಿ ಕಾಲುವೆಗೆ ನೀರು ಹರಿಸಲಾಗಿತ್ತು. ಸದ್ಯಕ್ಕೆ ಜಲಾಶದಯಲ್ಲಿ 35 ಟಿಎಂಸಿ ನೀರಿದ್ದರೂ ವಿಜಯನಗರ ಕಾಲುವೆಗೆ ಹರಿಸಲು ಜಲಸಂಪನ್ಮೂಲ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಎಡದಂಡೆ ಭಾಗದ ರೈತರನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಹೋರಾಟ ಅನಿವಾರ್ಯವಾಗಿದ್ದು, ಪಕ್ಷಾತೀತವಾಗಿ ರೈತರು ಪಾಲ್ಗೊಳ್ಳಬೇಕಿದೆ. ಜು.31ರಂದು ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಿಂದ ರೈತರು ಮತ್ತು ಸಾರ್ವಜನಿಕರನ್ನೊಳಗೊಂಡ ಟ್ರ್ಯಾಕ್ಟರ್, ಬೈಕ್ ಇತರ ವಾಹನಗಳ ಬೃಹತ್ ರ‌್ಯಾಲಿ ಹಮ್ಮಿಕೊಂಡಿದ್ದು, ನೀರು ಬಳಕೆಯ ಗ್ರಾಮಗಳಿಂದ ಕನಿಷ್ಠ 100 ರೈತರು ಭಾಗವಹಿಸುವಂತೆ ಮನವಿ ಮಾಡಿದರು.
ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ವಿಜಯನಗರ ಕಾಲುವೆಗೆ 2 ಟಿಎಂಸಿ ಅಡಿ ನೀರಿನ ಅಗತ್ಯವಿದ್ದು, ನಿತ್ಯ 150ಕ್ಯೂಸೆಕ್ ಹರಿಸಿದರೆ 25ಸಾವಿರ ಎಕರೆ ಪ್ರದೇಶದ ಕೃಷಿ ಭೂಮಿಗೆ ನೀರು ದೊರೆಯಲಿದೆ. ಕಾಲುವೆ ಬಲಭಾಗಕ್ಕೆ ನೀರು ಬಿಡುವ ಅಧಿಕಾರಿಗಳು ಎಡಭಾಗವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ. ನೀರು ಬಿಡುವ ಅಧಿಕಾರ ವಿಭಾಗೀಯ ಆಯುಕ್ತರಿಗಿದೆ ಎಂದು ಸುಳ್ಳು ಹೇಳುತ್ತಿದ್ದು, ಕುಡಿವ ನೀರು ಬಿಡಲು ಮಾತ್ರ ವಿಭಾಗೀಯ ಆಯುಕ್ತರಿಗೆ ಅಧಿಕಾರವಿದೆ. ನೀರು ಬಿಡಿಸಿಕೊಳ್ಳಲು ಹೋರಾಟವೊಂದೇ ಮಾರ್ಗವಾಗಿದ್ದು, ರೈತ ಶಕ್ತಿ ಸಾಬೀತುಪಡಿಸಬೇಕಿದೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ಗಿರೇಗೌಡ, ಟಿಎಪಿಸಿಎಂ ಅಧ್ಯಕ್ಷ ಚನ್ನಪ್ಪ ಮಳಗಿ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಉಪಾಧ್ಯಕ್ಷ ಮನೋಹರಗೌಡ ಹೇರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ಪ್ರಮುಖರಾದ ಮಲ್ಲಿಕಾರ್ಜುನಸ್ವಾಮಿ, ಚಂದ್ರಶೇಖರ್, ಬಿ.ನಾರಾಯಣಪ್ಪ, ವೆಂಕಟಸುಬ್ಬರಾವ್, ಎಸ್.ವಿ.ರಾಮರಾವ್ ಇತರರಿದ್ದರು.

ಸ್ಪಂದನೆ ಸಿಗದಿದ್ದರೆ ಹೋರಾಟ ಮುಂದುವರಿಕೆ

ಅಂಜನಾದ್ರಿ ಬೆಟ್ಟದಲ್ಲಿ ರೈತರನ್ನು ಹೊತ್ತ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಜು.31ರಂದು ರ‌್ಯಾಲಿ ಆರಂಭವಾಗಲಿದೆ. ಮುನಿರಾಬಾದ್‌ವರೆಗೂ ನಡೆಯಲಿದ್ದು, ನಂತರ ಪಾದಯಾತ್ರೆ ಮೂಲಕ ಕಾಡಾ ಕಚೇರಿಗೆ ತೆರಳಿ ಪ್ರತಿಭಟಿಸಲಾಗುವುದು. ಅಧಿಕಾರಿಗಳು ಸ್ಪಂದಿಸಿ ನೀರು ಹರಿಸಿದರೆ ಅಂದೇ ಪ್ರತಿಭಟನೆ ಮೊಟಕುಗೊಳಿಸಲಾಗುವುದು. ಸ್ಪಂದಿಸದಿದ್ದರೆ ಹಗಲು ರಾತ್ರಿ ಧರಣಿ ಮುಂದುವರಿಯಲಿದೆ. ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ವಿಜಯನಗರ ಕಾಲುವೆ ನೀರು ಬಳಕೆದಾರರು ಮತ್ತು ರೈತರು ಸಕ್ರಿಯವಾಗಿ ಭಾಗವಹಿಸಲು ಮನವಿ ಮಾಡಲಾಯಿತು. ಮೊದಲು ಅಂಜನಾದ್ರಿಯಿಂದ ಕಾಡಾ ಕಚೇರಿವರಿಗೆ 22 ಕಿ.ಮೀ. ಪಾದಯಾತ್ರೆ ನಡೆಸಲು ಮುಖಂಡರು ನಿರ್ಧರಿಸಿದ್ದರೂ, ರೈತರು ಒಪ್ಪದಿದ್ದರಿಂದ ಪ್ರತಿಭಟನೆ ರ‌್ಯಾಲಿ ಕೈಗೊಳ್ಳಲು ನಿರ್ಣಯಿಸಲಾಯಿತು.
"

ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವಿಜಯನಗರ ಕಾಲುವೆಗೆ ಹರಿಸಲಾಗುತ್ತಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ರೈತರ ಹಿತಾಸಕ್ತಿ ಅನುಗುಣ ಯೋಜನೆ ರೂಪಿಸಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ.

— ಎಸ್.ಶಿವರಾಮನಗೌಡ, ಮಾಜಿ ಸಂಸದ