ಗವಿಮಠದಲ್ಲಿ ಧೂಳು ಹೆಚ್ಚದಂತೆ ಟ್ಯಾಂಕರ್​ ಮೂಲಕ ನೀರು ಹಾಕುತ್ತಿರುವುದು. 
ಕೊಪ್ಪಳ

ಸ್ವಚ್ಛತೆಗೆ ಮಾದರಿಯಾದ ಅಜ್ಜನ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ಲಕ್ಷಾಂತರ ಜನ ಸೇರಿದರು ಅಸ್ವಚ್ಛತೆಗಿಲ್ಲ ಜಾಗ
  • ಇತರ ಉತ್ಸವಗಳಿಗೆ ಮಾದರಿ
ವಿಜಯವಾಣಿ ವಿಶೇಷ ಕೊಪ್ಪಳ
ಗವಿಮಠ ಜಾತ್ರೆ ಅನ್ನ-ಅಕ್ಷರ-ಅರಿವು ಜಾಗೃತಿಗೆ ಹೆಸರಾಗಿದೆ. 18 ದಿನಗಳ ಕಾಲ ನಡೆವ ಉತ್ಸವದಲ್ಲಿ ಲಾಂತರ ಜನ ಸೇರಿದರೂ ಅಸ್ವಚ್ಛತೆಗೊಂದಿಗೆ ಒಂದಿನಿತೂ ಜಾಗವಿಲ್ಲದಂತೆ ನಿರ್ವಹಿಸುವ ಮೂಲಕ ಸ್ವಚ್ಛತೆಗೆ ಮಾದರಿಯಾಗಿ ನಿಂತಿದೆ.
ಜ.1ರಿಂದ ಕಾರ್ಯಕ್ರಮ ಆರಂಭವಾಗಿದ್ದು ಜ.18ವರೆಗೂ ಮಹಾದಾಸೋಹ ಮುಂದುವರೆಯಲಿದೆ. ಬಸವೇಶ್ವರ ವೃತ್ತದಿಂದ ಹಿಡಿದು ಗವಿಮಠ ಆವರಣ, ಜಾತ್ರಾ ಆವರಣ, ಮಹಾ ದಾಸೋಹ ಭವನ, ಮಠದಂಗಳ, ಕೆರೆ, ಮುಖ್ಯ ರಸ್ತೆಗಳು ಎಲ್ಲೆಡೆ ನಿತ್ಯ ಲಾಂತರ ಭಕ್ತರು ಎಡತಾಕುತ್ತಾರೆ. ಬೆಳಗ್ಗೆಯಿಂದ ತಡರಾತ್ರಿವರೆಗೂ ಎತ್ತ ನೋಡಿದರೂ ಜನರನ್ನು ಕಾಣಬಹುದು. ಹೀಗಿದ್ದರೂ ಬೆಳಗ್ಗೆ ಎದ್ದು ನೋಡುವ ವೇಳೆಗೆ ಮತ್ತೆ ಹೊಸತನ ತುಂಬಿರುತ್ತದೆ. ಎತ್ತ ಕಣ್ಣು ಹಾಯಿಸಿದರೂ ಸುಂದರ ಪರಿಸರ ಕಣ್ಣಿಗೆ ಮುದ ನೀಡುತ್ತದೆ. ನೂರಾರು ಅಂಗಡಿಗಳು, ಹತ್ತಾರು ಬಂಡಿಗಳು, ಗೂಡಂಗಡಿ, ಹಣ್ಣು, ಆಟಿಕೆ, ಮಿಠಾಯಿ, ಐಸ್​ಕ್ರೀಂ, ಪಾನ್​ಮಸಾಲ ಇನ್ನಿತರ ಅಂಗಡಿಗಳಿದ್ದರೂ ಎಲ್ಲಿಯೂ ಒಂದು ಕಡ್ಡಿ ಕಸ ಕಾಣಿಸದು.
ಸ್ವಯಂ ಸೇವಕರು, ಕಾಲೇಜು ವಿದ್ಯಾರ್ಥಿಗಳು, ಎನ್​ಎಸ್​ಎಸ್​, ಎನ್​ಸಿಸಿ ಶಿಬಿರಾರ್ಥಿಗಳು ಇನ್ನಿತರರು ಸದಾ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುತ್ತಾರೆ. ಸ್ವತ@ ಗವಿಶ್ರೀಗಳು ಪೊರಕೆ ಹಿಡಿದು ನಿಲ್ಲುವ ಮೂಲಕ ಇತರರು ಸೋಮಾರಿತನ ಪ್ರದರ್ಶಿಸದೇ ಸಕಾಲಕ್ಕೆ ಕೆಲಸದಲ್ಲಿ ನಿರತರಾಗುತ್ತಾರೆ. ರಥ ಬೀದಿ, ಜಾತ್ರಾ ಆವರಣದಲ್ಲಿ ನಿತ್ಯವೂ ಕಸ ಗೂಡಿಸುವ ಜತೆಗೆ ಧೂಳು ಏಳದಂತೆ ನಿರ್ವಹಣೆ ಮಾಡಲಾಗುತ್ತಿದೆ. ದಾಸೋಹ ಭವನದಲ್ಲೂ ಅಗತ್ಯಕ್ಕಿಂತ ಹೆಚ್ಚು ಪ್ರಸಾದ ಹಾಕಿಸಿಕೊಂಡು ಕೆಡಿಸದಂತೆ ಸ್ವಯಂ ಸೇವಕರು ಜಾಗೃತಿ ಮೂಡಿಸುತ್ತಾರೆ. ಜತೆಗೆ ಮುಸರಿಯನ್ನು ಎಲ್ಲೆಂದರಲ್ಲಿ ಚೆಲ್ಲದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಲಕ್ಷ ಲಕ್ಷ ಜನ ಸೇರಿದರೂ ಸ್ವಚ್ಛತೆ ಹೇಗೆ ಕಾಪಾಡಬೇಕೆಂಬ ಮಾದರಿ ಪಾಠವನ್ನು ಶ್ರೀಮಠ ಮಾಡುತ್ತಿದೆ.

ಕಾಯಕ-ಸೇವಾ ತತ್ವ

ಇಂದು ದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದೇ ಸವಾಲಾಗಿದೆ. ನಗರ&ಪಟ್ಟಣಗಳಲ್ಲಂತೂ ತ್ಯಾಜ್ಯ ನಿರ್ವಹಣೆ ದುಬಾರಿ ಎನಿಸುತ್ತಿದೆ. ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಸದಾ ಕಾಯಕ&ದಾಸೋಹ ಜತೆಗೆ ಸ್ವಚ್ಛತಾ ತತ್ವ ಸಾರುತ್ತಿದ್ದಾರೆ. ಮಠದಂಗಳ, ಜಾತ್ರೆಯಲ್ಲಿ ಒಂದಿನಿತೂ ಅಸ್ವಚ್ಛತೆ ಕಂಡರೂ ಸಹಿಸುವುದಿಲ್ಲ. ನಿತ್ಯವೂ ಎಲ್ಲೆಡೆ ತಾವೇ ಸ್ವತ@ ಓಡಾಡಿ ಎಲ್ಲವನ್ನೂ ಗಮನಿಸುತ್ತಾರೆ. ಎಲ್ಲಿಯಾದರೂ ಕಸ ಕಂಡರೆ ಮತ್ತೊಬ್ಬರಿಗೆ ಸೂಚಿಸದೇ ತಾವೇ ತೆಗೆದು ಹಾಕುತ್ತಾರೆ. ಹೀಗಾಗಿ ಸ್ವಚ್ಛತಾ ಕಾರ್ಯಕ್ಕೆ ನಿಯುಕ್ತಿಗೊಂಡವರು ಶ್ರೀಗಳು ಬರುವ ಮುನ್ನವೇ ಎಚ್ಚೆತ್ತು ತಮ್ಮ ಸೇವೆ ಪೂರ್ಣಗೊಳಿಸಿಬಿಡುತ್ತಾರೆ.