ಸದನದಲ್ಲಿ ವಿಜಯವಾಣಿ ವರದಿ ಪ್ರದರ್ಶಿಸಿ ಚರ್ಚಿಸಿದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್.
- ಗಮನ ಸೆಳೆದ ದೊಡ್ಡನಗೌಡ, ಹಿಟ್ನಾಳ
- ವಿಜಯವಾಣಿ ವರದಿ ಪ್ರಸ್ತಾಪಿಸಿ ಚರ್ಚೆ
ಕೊಪ್ಪಳ: ತಾಲೂಕಿನ ಸ್ಪಾಂಜ್ ಮತ್ತು ಐರನ್ ಟಕಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಚರ್ಚಿಸುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ವಿಜಯವಾಣಿ ವರದಿ ಉಲ್ಲೇಖಿಸಿ ಸರ್ಕಾರದ ಗಮನ ಸೆಳೆದರು.
ಕೊಪ್ಪಳ ತಾಲೂಕುವೊಂದರಲ್ಲೇ 14 ಸ್ಪಾಂಜ್ ಆ್ಯಂಡ್ ಐರನ್ ಟಕಗಳಿವೆ. ಸಾಕಷ್ಟು ಧೂಳಿನಿಂದ ವಾಯು, ಜಲ ಮಾಲಿನ್ಯವಾಗುತ್ತಿದೆ. 20ಕ್ಕೂ ಹೆಚ್ಚು ಗ್ರಾಮಗಳು ಸಮಸ್ಯೆಗೆ ಈಡಾಗಿವೆ. ಮುಖ್ಯವಾಗಿ ಬಗನಾಳ ಗ್ರಾಮಸ್ಥರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಮಾಲಿನ್ಯಕಾರಕ ಕೈಗಾರಿಕೆಗಳ ವಿಸ್ತರಣೆಗೆ ಜನ ವಿರೋಧವಿದೆ. ಈ ನಡುವೆ ಬಿಎಸ್ಪಿಎಲ್ ವಿಸ್ತರಣೆಗೆ ಅನುಮತಿ ನೀಡಿದ್ದನ್ನು ಖಂಡಿಸಿ ನಿರಂತರ ಹೋರಾಟ ನಡೆಯುತ್ತಿದೆ. ಜನರ ಆಕ್ರೋಶ ಕಟ್ಟೆ ಒಡೆದಿದ್ದು ಜನಪ್ರತಿನಿಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೂವರೆ ವರ್ಷದಿಂದ ಹೋರಾಟ ನಡೆದರೂ ಸುಮ್ಮನ್ನಿದ್ದ ಕೊಪ್ಪಳ ಶಾಸಕ ರಾವೇಂದ್ರ ಹಿಟ್ನಾಳ ಕೊನೆಗೂ ಸದನದಲ್ಲಿ ಮಂಗಳವಾರ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಗಮನ ಸೆಳೆದರು.
ಕೈಗಾರಿಕೆಗಳಿಂದ ಅಪಾರ ಮಾಲಿನ್ಯವಾಗುತ್ತಿದೆ. ಇದರಿಂದ ಜನರು ಕಷ್ಟ ಅನುಭವಿಸುತ್ತಿದ್ದು ಪರಿಹಾರ ಕಂಡುಕೊಳ್ಳಬೇಕು. ಕೈಗಾರಿಕೆಗಳ ಮೇಲೆ ನಿಯಂತ್ರಣ ಹೇರುವಂತೆ ಒತ್ತಾಯಿಸಿದರು. ದನಿಗೂಡಿಸಿದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಬಗನಾಳದಲ್ಲಿ ಎಲ್ಲಿ ನೋಡಿದರೂ ಕಪು$್ಪ ಧೂಳಿದೆ. ಮಕ್ಕಳು ಅದರಲ್ಲೇ ಬದುಕುತ್ತಿದ್ದಾರೆ. ಮನೆಮಂದಿಯೆಲ್ಲ ರೋಗಗ್ರಸ್ತರಾಗಿದ್ದಾರೆಂದು ವಿವರಿಸಿದರು.
ಪ್ರತಿಧ್ವನಿಸಿದ ವಿಜಯವಾಣಿ
ಮಾಲಿನ್ಯದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಜಯವಾಣಿ ನಿರಂತರವಾಗಿ ವರದಿ ಬಿತ್ತರಿಸುವ ಮೂಲಕ ಸಮಸ್ಯೆಗಳ ಮೇಲೆ ಬೆಳಕು ಚೆಲುತ್ತಿದೆ. ಕೇವಲ ವಾಯುಮಾಲಿನ್ಯವಷ್ಟೇ ಅಲ್ಲದೇ ಜಲಮಾಲಿನ್ಯವೂ ಸಂಭವಿಸುತ್ತಿದೆ. ತುಂಗಭದ್ರಾ ಜಲಾಶಯವೂ ಕಲುಷಿತಗೊಳ್ಳುತ್ತಿದ್ದು ವರ್ಷದಿಂದ ವರ್ಷಕ್ಕೆ ಕುಡಿವ ಗುಣಮಟ್ಟ ಕುಸಿಯುತ್ತಿದೆ. ಈ ಬಗ್ಗೆ "ಬಳಕೆಗೆ ಒಕೆ ಕುಡಿದರೆ ಜೋಕೆ !' ಶೀರ್ಷಿಕೆಯಡಿ ಪ್ರಕಟಿಸಿದ ವಿಶೇಷ ವರದಿ ಉಲ್ಲೇಖಿಸಿದ ಶಾಸಕ ದೊಡ್ಡನಗೌಡ ಪಾಟೀಲ್ ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.