ಬಿಎಸ್​ಪಿಎಲ್​ ಸೇರಿ ಇತರ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಹೋರಾಟದಲ್ಲಿ ಶುಕ್ರವಾರ ವಿಪ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಬಿ.ಜಿ.ಕರಿಗಾರ, ಮಲ್ಲಿಕಾರ್ಜುನ ಬಿ. ಗೋನಾಳ, ಎಸ್​.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ ಇದ್ದರು.  
ಕೊಪ್ಪಳ

ಕಾರ್ಖಾನೆ ವಿಷಯ ಸದನದಲ್ಲಿ ಪ್ರಸ್ತಾಪ

ಪ್ರಮುಖ ಮುಖ್ಯಾಂಶಗಳು

  • ವಿಪ ವಿಪಕ್ಷ ನಾಯಕ ನಾರಾಯಣ ಸ್ವಾಮಿ ಭರವಸೆ
ಕೊಪ್ಪಳ: ಬಿಎಸ್​ಪಿಎಲ್​ ಸೇರಿ ಇನ್ನಿತರ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಭರವಸೆ ನೀಡಿದರು.
ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಶುಕ್ರವಾರ ಭಾಗಿಯಾಗಿ ಮಾತನಾಡಿದರು.
ಬಸಾಪುರ ಕೆರೆ ಸಾರ್ವಜನಿಕರ ಆಸ್ತಿ. ಅದು ಸರ್ಕಾರ ಕಟ್ಟಿದ್ದಲ್ಲ. ಮಾರಾಟ ಮಾಡಲು ಬಾರದು. ಕೂಡಲೇ ತೆರವುಗೊಳಿಸಬೇಕು. ಜನರ ಆರೋಗ್ಯ ಮುಖ್ಯ. ಸಿಎಂ ಮತ್ತು ಕೈಗಾರಿಕೆ ಸಚಿವರು ಕೇಂದ್ರದತ್ತ ಬೆಟ್ಟು ಮಾಡುವುದು ಬಿಟ್ಟು ಕಾರ್ಖಾನೆ ವಿಸ್ತರಣೆ ರದ್ದುಗೊಳಿಸಿ. ಹೋರಾಟಕ್ಕೆ ನನ್ನ ಬೆಂಬಲ ಇರಲಿದೆ. ಸರ್ಕಾರದ ವಿರುದ್ಧ ಈಗಾಗಲೇ ಹೋರಾಟ ಆರಂಭವಾಗಿದೆ. ಮುಂದೆ ತೀವ್ರಗೊಳ್ಳಲಿದೆ. ಸ್ಥಳಿಯ ನಾಯಕರು ಹೆಚ್ಚಿನ ಮುತುವರ್ಜಿವಹಿಸಿ ಜನರ ಜೀವ ಉಳಿಸಿ. ಸದನದಲ್ಲಿ ನಾನೂ ವಿಷಯ ಪ್ರಸ್ತಾಪಿಸುವೆ ಎಂದು ಭರವಸೆ ನೀಡಿದರು.
ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, 78ದಿನದಿಂದ ಅರ್ನಿದಿಷ್ಟ ಅವಧಿ ಹೋರಾಟ ನಡೆದಿದೆ. ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಜನಪ್ರತಿನಿಧಿಗಳು ಗವಿಮಠದ ಪೂಜ್ಯರಿಗೆ ಅವಮಾನ ಮಾಡಬಾರದು. ಅವರು ಈ ಭಾಗದ ದಿವ್ಯ ಶಕ್ತಿ. ಅವರಿಗೆ ನೋವು ನೀಡಬೇಡಿ ಎಂದು ಮನವಿ ಮಾಡಿದರು.
ಹೋರಾಟಗಾರರಾದ ಬಿ.ಜಿ.ಕರಿಗಾರ, ಮಲ್ಲಿಕಾರ್ಜುನ ಬಿ. ಗೋನಾಳ, ಎಸ್​.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಜಿ. ಬಿ. ಪಾಟೀಲ್​, ಮಂಜುನಾಥ ಗೊಂಡಬಾಳ, ರಾಜೇಶ ಸಸಿಮಠ, ಬಿಜೆಪಿ ಮುಖಂಡರಾದ ಡಾ. ಬಸವರಾಜ ಕ್ಯಾವಟರ್​, ಗಣೇಶ ಹೊರತಟ್ನಾಳ, ಕನಕಪ್ಪ ಚಲುವಾದಿ, ಪಿಎಲ್​ ಡಿ ಬ್ಯಾಂಕ್​ ಅಧ್ಯಕ್ಷ ಗ್ಯಾನೇಶ ಇತರರಿದ್ದರು.