ಕನಕಗಿರಿಯಲ್ಲಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಅಧ್ಯಕ್ಷ ರಾಮಣ್ಣ, ಪದಾಧಿಕಾರಿಗಳಾದ ಶಿವಗಂಗಪ್ಪ, ಕನಕಪ್ಪ, ಕುಂಟೆಪ್ಪ ಇತರರಿದ್ದರು. 
ಕೊಪ್ಪಳ

ಗೌರವಯುತ ಜೀವನ ನಡೆಸಲು ಅನುಕೂಲ ಕಲ್ಪಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಮನವಿ
  • ಅಂಗವಿಕಲರ-ಪಾಲಕರ ಒಕ್ಕೂಟದಿಂದ ಪ್ರತಿಭಟನೆ
ಕನಕಗಿರಿ: ಅಂಗವಿಕಲರ ಮಾಸಾಶನ ನಿಲುಗಡೆ ಹಾಗೂ ಹಾಸ್ಯಾಸ್ಪದ ಆದಾಯ ಮಿತಿ ನಿಗದಿಪಡಿಸಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ರಾಮಣ್ಣ ಅಡವಿಬಾವಿ ಮಾತನಾಡಿ, ರಾಜ್ಯ ಸರ್ಕಾರ ವಾರ್ಷಿಕ ಆದಾಯ 32 ಸಾವಿರ ರೂ. ಇರುವ ಫಲಾನುಭವಿಗಳನ್ನು ಪರಿಶೀಲಿಸಬೇಕೆಂದು ತಿಳಿಸಿದೆ. ಈ ಆದೇಶದಿಂದ ಅಂಗವಿಕಲರು ಸಮಸ್ಯೆಗೆ ತುತ್ತಾಗಲಿದ್ದಾರೆ. ಯೋಜನೆಯ ಫಲಾನುಭವಿಗಳ ಮಾಸಾಶನ ತಡೆ ಹಿಡಿದಿದ್ದರಿಂದ ಔಷಧ, ಚಿಕಿತ್ಸೆ, ಪ್ರಯಾಣ ವೆಚ್ಚ ಇತರ ಖರ್ಚುಗಳಿಗೆ ಬೆರೆಯವರನ್ನು ಅವಲಂಬಿಸಬೇಕಿದೆ.
ವಾರ್ಷಿಕ 32 ಸಾವಿರ ರೂ. ಎನ್ನುವುದು ಮಾಸಿಕ 2700 ರೂ. ಆಗಲಿದೆ. ಇಷ್ಟು ಕನಿಷ್ಠ ಮೊತ್ತದಲ್ಲಿ ವ್ಯಕ್ತಿ ಜೀವನ ನಡೆಸುವುದು ಕಷ್ಟವಾಗಿದೆ. ಬಿಪಿಎಲ್ ಕಾರ್ಡ್ ಪಡೆಯಲು ಗರಿಷ್ಠ 1.20 ಲಕ್ಷ ರೂ. ಆದಾಯ ನಿಗದಿಪಡಿಸಿರುವ ಸರ್ಕಾರ ಅಂಗವಿಕಲರಿಗೆ ನೆರೆ ರಾಜ್ಯಗಳಲ್ಲಿನ ಆದಾಯಕ್ಕಿಂತ ಕಡಿಮೆ ವಾರ್ಷಿಕ ಆದಾಯ ನಿಗದಿಪಡಿಸಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ನಿಗದಿಪಡಿಸಿರುವ ಆದಾಯವನ್ನು ಅಂಗವಿಕಲರಿಗೆ ಪರಿಗಣಿಸಬೇಕೆಂದು ಆಗ್ರಹಿಸಿದರು.
ಕಾರ್ಯದರ್ಶಿ ಲಕ್ಷ್ಮಣ್ಣ ವಡಕಿ ಮಾತನಾಡಿ, ತಡೆ ಹಿಡಿದಿರುವ ಮಾಸಾಶನವನ್ನು ಬಿಡುಗಡೆಗೊಳಿಸಬೇಕು. ಸೌಲಭ್ಯ ಪಡೆಯುವ ನಕಲಿ ಅಂಗವಿಕಲರನ್ನು ಪರಿಶೀಲಿಸಬೇಕು. ಜೀವನ ನಿರ್ವಹಣಾ ಭತ್ಯೆ 10 ಸಾವಿರ ರೂ.ಗೆ ಹೆಚ್ಚಿಸಬೇಕು. ಪುನರ್ವಸತಿ ಕಾರ್ಯಕರ್ತರ ಸೇವೆ ಕಾಯಂಗೊಳಿಸಬೇಕು. ಅಂಗವಿಕಲರನ್ನು ಅಂಗವಿಕಲರೇ ವಿವಾಹವಾದರೆ ಲಕ್ಷ ರೂ. ಸಹಾಯಧನ ನೀಡಬೇಕು. ಆಧಾರ ಯೋಜನೆಯ ಸಾಲವನ್ನು 3 ಲಕ್ಷ ರೂ.ಗೆ ಹೆಚ್ಚಿಸಬೇಕು. ಅಂಗವಿಕಲರಿಗೆ ನಿವೇಶನ ನೀಡಲು ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಪದಾಧಿಕಾರಿಗಳಾದ ವೆಂಕೋಬಪ್ಪ, ರಾಮಣ್ಣ, ರಾಜಣ್ಣ ಬೀಡಿ, ಶಿವಗಂಗಪ್ಪ, ಕನಕಪ್ಪ, ಕುಂಟೆಪ್ಪ, ಗ್ಯಾನಪ್ಪ ಕನಕರಾಯ ಇತರರಿದ್ದರು.