ಹುಬ್ಬಳಿಯಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತಗೆ ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ಕುಷ್ಟಗಿಯ ರೈಲ್ವೆ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಪ್ರಮುಖರಾದ ಭರತೇಶ ಜೋಶಿ, ಉಮೇಶ್ ಮಂಗಳೂರು, ಮಲ್ಲಣ್ಣ ಪಲ್ಲೇದ, ಮಂಜುನಾಥ ಮಹಾಲಿಂಗಪುರ, ಎಸ್.ಎನ್. ಘೋರ್ಪಡೆ, ಸುರೇಶ ಕುಂಟನಗೌಡ, ವೀರೇಶ ಕರಡಿ ಇತರರಿದ್ದರು. 
ಕೊಪ್ಪಳ

ಕುಷ್ಟಗಿವರೆಗೆ ಬೆಂಗಳೂರು ರೈಲು ವಿಸ್ತರಿಸಿ

ಕುಷ್ಟಗಿ: ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ಸೂಪರ್‌ಫಾಸ್ಟ್ ರೈಲನ್ನು (ಸಂಖ್ಯೆ 20688/20687) ಗದಗ ಹಾಗೂ ತಳಕಲ್ ಜಂಕ್ಷನ್ ಮೂಲಕ ಕುಷ್ಟಗಿವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ಗುರುವಾರ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತಗೆ ಮನವಿ ಸಲ್ಲಿಸಿತು. 

ಕುಷ್ಟಗಿಗೆ ರೈಲು ಸಂಪರ್ಕ ಕಲ್ಪಿಸಬೇಕೆಂಬ ಜನರ ಏಳು ದಶಕಗಳ ಬೇಡಿಕೆ ಈಡೇರಿದ್ದು, 2025ರ ಮೇ 15ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ನಿತ್ಯ ರೈಲು ಸಂಚರಿಸುತ್ತಿದೆ. ಆದರೆ, ಬೆಂಗಳೂರಿಗೆ ನೇರ ರೈಲು ಸಂಪರ್ಕ ಇಲ್ಲದ ಕಾರಣ ಈ ಭಾಗದ ಜನ ಬಸ್‌ಗಳನ್ನೇ ಅವಲಂಬಿಸಿದ್ದಾರೆ. 
ಆದ್ದರಿಂದ ಬೆಂಗಳೂರು-ಹುಬ್ಬಳ್ಳಿ ಸೂಪರ್‌ಫಾಸ್ಟ್ ರೈಲನ್ನೇ ಗದಗ ಹಾಗೂ ತಳಕಲ್ ಮಾರ್ಗವಾಗಿ ಕುಷ್ಟಗಿವರೆಗೆ ವಿಸ್ತರಿಸಿದರೆ ಅನುಕೂಲವಾಗಲಿದೆ. ಅಲ್ಲದೆ ಗಜೇಂದ್ರಗಡ, ಇಳಕಲ್, ಯಲಬುರ್ಗಾ, ಕುಕನೂರು ಸೇರಿದಂತೆ ಸುತ್ತಲಿನ ಪ್ರದೇಶಗಳ ಜನರಿಗೂ ಸಹಾಯಕವಾಗಲಿದ್ದು, ಬೇಡಿಕೆ ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
ಸಮಿತಿಯ ಭರತೇಶ ಜೋಶಿ, ಉಮೇಶ್ ಮಂಗಳೂರು, ಮಲ್ಲಣ್ಣ ಪಲ್ಲೇದ, ಮಂಜುನಾಥ ಮಹಾಲಿಂಗಪುರ, ಎಸ್.ಎನ್. ಘೋರ್ಪಡೆ, ಸುರೇಶ ಕುಂಟನಗೌಡ, ವೀರೇಶ ಕರಡಿ ಇತರರಿದ್ದರು.