ಗಂಗಾವತಿ ಬಂಡಿಬಸಪ್ಪ ಕ್ಯಾಂಪ್ ಬಳಿ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್ ಮೂಲಕ ಮರಳು ಸಾಗಿಸುತ್ತಿರುವುದು. ರಾತ್ರಿ ವೇಳೆ ರಾಜಾರೋಷವಾಗಿ ಸಂಚರಿಸುವ ಮರಳು ತುಂಬಿದ ಟಿಪ್ಪರ್.
- ಬೆಳಗಿನ ಜಾವ-ರಾತ್ರಿ ಟಿಪ್ಪರ್‌ಗಳ ಸಂಚಾರ
- ಗಂಗಾವತಿ ಮಾಹಿತಿ ನೀಡಿದರೂ ಕ್ರಮವಹಿಸದ ಅಧಿಕಾರಿಗಳು
ಗಂಗಾವತಿ: ಆನೆಗೊಂದಿ ಸಂಪರ್ಕಿಸುವ ರಸ್ತೆಯಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು, ರಾತ್ರಿ ಮತ್ತು ಬೆಳಗಿನ ಜಾವ ಟಿಪ್ಪರ್‌ಗಳ ಸಂಚಾರ ಹೆಚ್ಚುತ್ತಿದೆ.
ಗಂಗಾವತಿ ಭಾಗದಲ್ಲಿ ಮರಳು ಪಾಯಿಂಟ್ ಇಲ್ಲದಿದ್ದರೂ ಕನಕಗಿರಿ, ನವಲಿ ಭಾಗದಲ್ಲಿರುವ ಮರಳು ಪಾಯಿಂಟ್‌ನಿಂದಲೇ ಅತಿ ಹೆಚ್ಚು ಮರಳು ಸಾಗಿಸಲಾಗುತ್ತಿದ್ದು, ರಾಯಲ್ಟಿ ವಂಚಿಸಲಾಗುತ್ತಿದೆ. ನವಲಿಯಿಂದ ಮರಿಯಮ್ಮನಹಳ್ಳಿವರೆಗೆ ಒಂದು ಟಿಪ್ಪರ್ ಪರವಾನಗಿ ಪಡೆದು ಐದಾರು ಟಿಪ್ಪರ್ ಮರಳು ಸಾಗಿಸುತ್ತಿದ್ದಾರೆ. ಇಲಾಖೆ ವರದಿಯಂತೆ ತಿಂಗಳಿಗೆ 30 ಟಿಪ್ಪರ್‌ಗೆ ಮಾತ್ರ ಮರಳು ಸಾಗಣೆಗೆ ಪರವಾನಗಿ ನೀಡಿದರೆ, ಅಕ್ರಮ ಸಾಗಣೆದಾರರು 100ರಿಂದ 120 ಟಿಪ್ಪರ್ ಮರಳು ಸಾಗಿಸುತ್ತಿದ್ದಾರೆ.
ರಾತ್ರಿ ಮತ್ತು ಬೆಳಗಿನ ಜಾವ ಸಂಚಾರ ಹೆಚ್ಚಾಗಿದ್ದು, ನಗರದ ಪೊಲೀಸ್ ಠಾಣೆ, ತಾಲೂಕಾಡಳಿತ ಸೌಧ ಕಚೇರಿ, ಕಮಲಾಪುರ ಪೊಲೀಸ್ ಠಾಣೆ ಮುಂಭಾಗದಿಂದಲೇ ಟಿಪ್ಪರ್‌ಗಳು ಓಡಾಡುತ್ತಿವೆ. ರೈತರ ಟ್ರ್ಯಾಕ್ಟರ್‌ಗಳನ್ನು ಹಿಡಿಯುವ ಕಂದಾಯ, ಪೊಲೀಸ್ ಮತ್ತು ಗ್ರಾಪಂ ಅಧಿಕಾರಿಗಳು ಟಿಪ್ಪರ್‌ಗಳತ್ತ ನೋಡಲ್ಲ. ಕೆಲ ಟಿಪ್ಪರ್‌ಗಳಿಗೆ ನಂಬರ್ ಪ್ಲೇಟ್‌ಗಳಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಡ್ಡಾದಿಡ್ಡಿ ಸಂಚಾರ: ಅಕ್ರಮ ಸಾಗಣೆಯ ಟಿಪ್ಪರ್‌ಗಳ ಅಡ್ಡಾದಿಡ್ಡಿ ಸಂಚಾರದಿಂದ ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್, ಕಡೇಬಾಗಿಲು ಭಾಗದ ಜನರು ರೋಸಿ ಹೋಗಿದ್ದು, ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ. ನಿಗದಿಗಿಂತ ಹೆಚ್ಚಿನ ಭಾರದ ಟಿಪ್ಪರ್‌ಗಳ ಓಡಾಟದಿಂದ ರಸ್ತೆಯೂ ಹಾಳಾಗುತ್ತಿದ್ದು, ಹಲವು ಬಾರಿ ಟಿಪ್ಪರ್‌ಗಳನ್ನು ತಡೆದು ವಿಚಾರಿಸಿದರೆ ಪ್ರಭಾವಿಗಳ ಮೂಲಕ ಸಾಗಣೆದಾರರು ತಪ್ಪಿಸಿಕೊಳ್ಳುತ್ತಿದ್ದಾರೆ. ಸಚಿವ ಶಿವರಾಜ ತಂಗಡಗಿ ಬೆಂಬಲಿಗರ ಪ್ರಭಾವ ಹೆಚ್ಚುತ್ತಿದ್ದು, ಟಿಪ್ಪರ್‌ಗಳನ್ನು ತಡೆದರೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಲೋಕೋಪಯೋಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ ಸ್ಪಂದಿಸುತ್ತಿಲ್ಲ. ಪೊಲೀಸರು ಹೋಗ್ಲಿ ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ರಸ್ತೆಯಲ್ಲಿ ನಿಗದಿ ಮೀರಿ ಮರಳು ತುಂಬಿದ ಟಿಪ್ಪರ್‌ಗಳ ಓಡಾಟ ಹೆಚ್ಚಿದೆ. ರಾತ್ರಿ ಮತ್ತು ಬೆಳಗಿನ ಜಾವ ಮಿತಿಮೀರಿದೆ. ನಂಬರ್ ಪ್ಲೇಟ್‌ಗಳಿಲ್ಲದ ಟಿಪ್ಪರ್‌ಗಳಿಂದ ಹೊರ ಜಿಲ್ಲೆಗೆ ಮರಳು ಅಕ್ರಮ ಸಾಗಣೆಯಾಗುತ್ತಿದೆ. ಪ್ರಶ್ನಿಸಿದರೆ ಬೆದರಿಕೆ ಹಾಕಲಾಗುತ್ತಿದೆ.
— > ಹೊನ್ನಪ್ಪ ನಾಯಕ ರಾಜ್ಯ ಸಂ.ಕಾರ್ಯದರ್ಶಿ, ಸ್ವಾಭಿಮಾನಿ ಕರವೇ