ಹಲವಾಗಲಿಯಲ್ಲಿ ಸ್ಮಶಾನಕ್ಕೆ ತೆರಳುವ ರಸ್ತೆ ತಗ್ಗು ದಿಣ್ಣೆಗಳಿಂದ ಕೂಡಿರುವುದು.
ಅಳವಂಡಿ: ಸಾಮಾನ್ಯವಾಗಿ ಹಳ್ಳಿ ಅಥವಾ ಪಟ್ಟಣದ ಹೊರವಲಯದ ಹಳ್ಳ, ಕೊಳ್ಳ, ನದಿ ಇಲ್ಲವೇ, ನೀರಿನ ತೊರೆಯ ಸನಿಹದಲ್ಲಿ ಸ್ಮಶಾನಗಳಿರುತ್ತವೆ. ಆದರೆ, ಸ್ಮಶಾನಕ್ಕೆ ಹೋಗಲು ದಾರಿಯೇ ಇಲ್ಲದಿದ್ದರೆ ? ಇಂತಹದೊಂದು ವಿಚಿತ್ರ ಹಾಗೂ ಅಮಾನವೀಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಹಲವಾಗಲಿ ಗ್ರಾಮಸ್ಥರು. ಗ್ರಾಮಕ್ಕೆ ಸ್ಮಶಾನದ ಜಾಗವಿದ್ದರೂ ಅಲ್ಲಿಗೆ ಹೋಗಲು ಸರಿಯಾದ ದಾರಿ ಇಲ್ಲದೆ, ಅಂತ್ಯಕ್ರಿಯೆ ನೆರವೇರಿಸಲು ಗ್ರಾಮಸ್ಥರು ಪ್ರತಿ ಬಾರಿ ಪಡಬಾರದ ಕಷ್ಟ ಪಡುತ್ತಿದ್ದಾರೆ.
ಬೋಚನಹಳ್ಳಿ ಗ್ರಾಪಂ ವ್ಯಾಪ್ತಿ ಹಲವಾಗಲಿ ಗ್ರಾಮವು ಸುಮಾರು 1500 ಜನಸಂಖ್ಯೆ ಹೊಂದಿದೆ. ಗ್ರಾಮದಿಂದ ಸುಮಾರು 800 ಮೀಟರ್ ದೂರದಲ್ಲಿರುವ ತುಂಗಭದ್ರಾ ನದಿ ತೀರದ ಹತ್ತಿರವೇ ಸ್ಮಶಾನವಿದೆ. ಆದರೆ, ಅಲ್ಲಿಗೆ ತಲುಪುವ ದಾರಿ ಮಾತ್ರ ನರಕಸದೃಶವಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ದಟ್ಟವಾಗಿ ಮುಳ್ಳಿನ ಕಂಟಿಗಳು ಬೆಳೆದು ನಿಂತಿದ್ದು, ಜನರು ನಡೆಯಲು ಸಾಧ್ಯವಾಗದಂತೆ ಇಡೀ ಹಾದಿ ಮುಚ್ಚಿಹೋಗಿದೆ. ಇನ್ನು ರಸ್ತೆಯುದ್ದಕ್ಕೂ ಇರುವ ತಗ್ಗು-ದಿಣ್ಣೆಗಳು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿವೆ.
ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತಿಮ ಸಂಸ್ಕಾರ ನೆರವೇರಿಸಲು ಈ ಮುಳ್ಳಿನ ಕಂಟಿಗಳ ಮಧ್ಯೆಯೇ ಶವ ಹೊತ್ತು ಸಾಗಬೇಕಾದ ಅನಿವಾರ್ಯತೆ ಇದೆ. ಸ್ಮಶಾನಕ್ಕೆ ಅಧಿಕೃತವಾಗಿ ಜಾಗವಿದ್ದರೂ, ಅಲ್ಲಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಇಲ್ಲದಿರುವುದು ಗ್ರಾಮದ ಜನರನ್ನು ಹೈರಾಣಾಗಿಸಿದೆ.
ಈ ಕುರಿತು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಿ, ರಸ್ತೆ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸುತ್ತಿದ್ದಾರೆ.
"
ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ತಗ್ಗು-ದಿಣ್ಣೆಗಳಿಂದ ಕೂಡಿದೆ. ಇನ್ನು ಮಳೆಗಾಲದಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳುವುದು ಕಷ್ಟವಾಗಿದೆ. ರಸ್ತೆ ದುರಸ್ತಿ ಬಗ್ಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ, ಕೂಡಲೇ ರಸ್ತೆ ನಿರ್ಮಿಸಬೇಕು.
— ಸಾರೆಪ್ಪ ಪೂಜಾರ, ಹಲವಾಗಲಿ ಗ್ರಾಮಸ್ಥ,