ಬಸರಿಹಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಸಸಿ ನೆಡಲಾಯಿತು. ಮುಖ್ಯಶಿಕ್ಷಕ ಧರ್ಮಣ್ಣ ಲಮಾಣಿ, ಸಹ ಶಿಕ್ಷಕ ಯಮುನೂರಪ್ಪ, ಎಸ್ಡಿಎಂಸಿ ಅಧ್ಯಕ್ಷ ಪರುಶುರಾಮ, ಪ್ರಮುಖರಾದ ನಾಗಪ್ಪ ಗದ್ದಿ, ಉಮೇಶ್, ಮೇಲ್ವಿಚಾರಕ ಎನ್.ಗಂಗಾಧರಪ್ಪ ಹಾಗೂ ವಿದ್ಯಾರ್ಥಿಗಳಿದ್ದರು.
- ದೈಹಿಕ ಶಿಕ್ಷಕ ನಾಗಪ್ಪ ಅಭಿಮತ
- ಬಸರಿಹಾಳ ವಿಶ್ವ ಪರಿಸರ ದಿನ
ಕನಕಗಿರಿ: ಪರಿಸರ ಸಂರಕ್ಷಣೆ ಸರ್ಕಾರ ಹಾಗೂ ಇಲಾಖೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ದೈಹಿಕ ಶಿಕ್ಷಕ ನಾಗಪ್ಪ ಹೇಳಿದರು.
ಬಸರಿಹಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ (ಬಿ.ಸಿ) ಟ್ರಸ್ಟ್‌ಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ರಕ್ಷಣೆ, ಪೋಷಣೆಯು ಭೂಮಿ ಮೇಲೆ ವಾಸ ಮಾಡುವ ಪ್ರತಿ ನಾಗರಿಕನ ಜವಾಬ್ದಾರಿಯಾಗಿದೆ. ಪ್ರಸ್ತುತ ನಾವೆಲ್ಲ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಎಚ್ಚರ ವಹಿಸಬೇಕಾಗಿದೆ. ನಾವು ಪರಿಸರವನ್ನು ಸಂರಕ್ಷಿಸಿದರೆ ಮುಂದಿನ ಪೀಳಿಗೆಯೂ ಪರಿಸರ ಸಂರಕ್ಷಿಸುವ, ಪ್ರೀತಿಸುವ ಗುಣವನ್ನು ಬೆಳಸಿಕೊಳ್ಳುತ್ತದೆ. ಪ್ರತಿ ಗ್ರಾಮದಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಹೊಳೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಪರಿಸರವು ಮಾನವ ಕುಲದಿಂದ ಹೆಚ್ಚು ನಾಶವಾಗುವುದೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಗ್ರಾಮಗಳ ಗೋಮಾಳ, ದೇವಸ್ಥಾನ ಆವರಣ, ಶಾಲಾವರಣ, ಕೆರೆ, ಗೋಕಟ್ಟೆ, ರೈತರ ತೋಟಗಳಲ್ಲಿ ಹೆಚ್ಚು ಗಿಡ-ಮರಗಳನ್ನು ಬೆಳೆಸಬೇಕು. ಇಲ್ಲವಾದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ವರ್ಷಪೂರ್ತಿ ಬರ ಬಂದರೂ ಆಶ್ಚರ್ಯವಿಲ್ಲ ಎಂದು ತಿಳಿಸಿದರು.