ಕೊಪ್ಪಳದ ಹಮಾಲರ ಕಾಲೋನಿ ಅಂಗನವಾಡಿಯಲ್ಲಿ ಶಾಲಾ ಪೂರ್ವ ಶಿಕ್ಷಣ ಮುಗಿಸಿ ಶಾಲೆಗೆ ತೆರಳುವ ಮಕ್ಕಳಿಗೆ ಪದವಿ ಪ್ರಧಾನ ಮಾಡಿ ಪ್ರಮಾಣಪತ್ರ ವಿತರಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ, ಅಂಗನವಾಡಿ ಮೇಲ್ವಿಚಾರಕರಾದ ಗಾಯತ್ರಿ, ಉಷಾ ಇದ್ದರು.
- ರೋಹಿಣಿ ಕೊಟಗಾರ್
- ಅಂಗನವಾಡಿಯಲ್ಲಿ ಘಟಿಕೋತ್ಸವ
ಕೊಪ್ಪಳ : ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಹಾಗೂ ಪರಿಣಾಸಮಕಾರಿ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿದರೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಅಂಗನವಾಡಿಗಳಿಗೆ ದಾಖಲಿಸಲು ಮುಂದಾಗುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ್ ಹೇಳಿದರು.
ನಗರದ ಹಮಾಲರ ಕಾಲೋನಿ ಅಂಗನವಾಡಿ ಕೇಂದ್ರ&3ರಲ್ಲಿ ಶಾಲಾ ಪೂರ್ವ ಶಿಕ್ಷಣ ಪೂರ್ಣಗೊಳಿಸಿ ಪ್ರಾಥಮಿಕ ಶಾಲೆಗೆ ಪ್ರವೇಶಿಸುತ್ತಿರುವ ಮಕ್ಕಳಿಗೆ ಮಂಗಳವಾರ ಆಯೋಜಿಸಿದ್ದ ಘಟಿಕೋತ್ಸವ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳು ಮೂರು ವರ್ಷಗಳ ಅವಧಿಯಲ್ಲಿ ಕಲಿತ ವಿಷಯಗಳ ಕುರಿತು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಗಣಿತ ಪೂರ್ವ ಚಟುವಟಿಕೆಗಳು, ಅಂಕಿಗಳು, ಬಣ್ಣಗಳು, ಆಕಾರಗಳು, ಪ್ರಾಣಿಗಳು ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಕ್ಕಳು ತಮ್ಮ ತೊದಲು ನುಡಿಯಲ್ಲಿ ಆತ್ಮವಿಶ್ವಾಸದಿಂದ ವಿವರಣೆ ನೀಡಿದರು. ಮಕ್ಕಳ ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯವನ್ನು ಕಂಡು ಅಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅಂಗನವಾಡಿಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವೂ ನಡೆಯಿತು. ವಿಶ್ವವಿದ್ಯಾಲಯಗಳ ಘಟಿಕೋತ್ಸವ ಮಾದರಿಯಲ್ಲಿ ಶಾಲೆಗೆ ತೆರಳುವ ಮಕ್ಕಳಿಗೆ ಪದವಿ ಪ್ರಧಾನ ಮಾಡಿ ಪ್ರಮಾಣಪತ್ರ ವಿತರಿಸಿರುವುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಪ್ರಮಾಣಪತ್ರ ಸ್ವೀಕರಿಸಿದ ಮಕ್ಕಳನ್ನು ಕಂಡು ಪೋಷಕರು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ, ಅಂಗನವಾಡಿ ಮೇಲ್ವಿಚಾರಕರಾದ ಗಾಯತ್ರಿ, ಉಫಿಾ, ಅಂಗನವಾಡಿ ಕಾರ್ಯಕರ್ತೆಯರಾದ ಜಯಮ್ಮ, ಮಲ್ಲಮ್ಮ ಹಾಗೂ ಶೈಲಜಾ ಇತರರಿದ್ದರು.