ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರಾದ ಮಂಜುನಾಥ ಬನ್ನಿಗೋಳ್, ದೇವರಾಜ ವಿಶ್ವಕರ್ಮ, ಮಂಜುನಾಥ ಗುಜುಮಾಗಡಿ, ಮಂಜುನಾಥ್ ಬೆಳಗಲ್, ನಾಗಮ್ಮ ಕಂಬಳಿ ಇತರರಿದ್ದರು.
ಕುಷ್ಟಗಿ: ಬಿಜಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಎಸ್ಸೆಸೆಲ್ಸಿಯಲ್ಲಿ ಶೇ.100 ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರಿಗೆ ಗ್ರಾಮಸ್ಥರು ಶನಿವಾರ ಸನ್ಮಾನಿಸಿದರು.
ಮುಖ್ಯಶಿಕ್ಷಕ ಬಸವರಾಜ ಬಾಗಲಿ ಮಾತನಾಡಿ, ಇದೊಂದು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮವಾಗಿದೆ. ಪಾಲಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಸಂಕಲ್ಪ ತೊಡಬೇಕು. ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ಪಡೆದು ಉನ್ನತ ಸ್ಥಾನ ಹೊಂದಬೇಕು. ಶಾಲೆಯಲ್ಲಿ ಅನುಭವಿ ಶಿಕ್ಷಕರಿದ್ದು, ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದೆ ಸರ್ಕಾರಿ ಶಾಲೆಗೆ ಕಳುಹಿಸಬೇಕು ಎಂದರು.
ಶಿಕ್ಷಕ ಹಂಪಯ್ಯ ಜಂಬಲದಿನ್ನಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳು ಕಡಿಮೆ ಮಾಡಿ ಪುಸ್ತಕ ಪ್ರೇಮ ಹೆಚ್ಚಿಸಿಕೊಳ್ಳಬೇಕು. ಗ್ರಾಮದ ಅನೇಕ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಿಕೊಂಡಲ್ಲಿ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದರು.
ಶಿಕ್ಷಕರಾದ ಸಂತೋಷ್ ನಾಗಲೋಟಿ, ವಿಜಯಕುಮಾರ್, ಪ್ರಸನ್ನಕುಮಾರ, ಶಶಿಧರ್ ಗೊರಬಾಳ್, ವಿಜಯಲಕ್ಷ್ಮೀ ದೇಸಾಯಿ, ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಗ್ರಾಮಸ್ಥರಾದ ಭೀಮಣ್ಣ ಹೂಗಾರ್, ಕುಂಟೆಪ್ಪ ತಳವಾರ್, ಗೋಕುಲ ಕೃಷ್ಣಪ್ಪ ತೆಗ್ಗಿನಮನಿ, ಮಾರುತಿ ಭೋವಿ, ಬಸವಂತಪ್ಪ ಕರಿಚಂದನ, ಹನುಮಂತ ಭೋವಿ, ಮಲ್ಲಮ್ಮ ವೀರಾಪುರ ಇತರರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಮಹಾಲಕ್ಷ್ಮೀ ವೀರಾಪುರ, ಬಸಮ್ಮ ಗಡಾದ, ಬಸಮ್ಮ ಹಿರೇಕೊಡಲಿ, ಮಹಾದೇವಿ ಕ್ಯಾದಿಗುಂಪಿ ಅವರನ್ನು ಸನ್ಮಾನಿಸಲಾಯಿತು.