ಗಂಗಾವತಿ ತಾಲೂಕಿನ ಅರಳಹಳ್ಳಿಯ ಸ.ನಂ.73ರ ಒತ್ತುವರಿ ಸರ್ಕಾರಿ ಭೂಮಿಯನ್ನು ಪೊಲೀಸ್ ಸಮ್ಮುಖದಲ್ಲಿ ಗುರುವಾರ ಸರ್ವೇ ನಡೆಸಲಾಯಿತು. ಉಪತಹಸೀಲ್ದಾರ್ ಅಬ್ದುಲ್ ರಹೇಮಾನ್, ಕಂದಾಯ ನಿರೀಕ್ಷಕ ಮಹೇಶ ದಲಾಲ್, ಗ್ರಾಮಾಡಳಿತಾಧಿಕಾರಿ ರತ್ನಮ್ಮ ಹಾಗೂ ಗ್ರಾಮೀಣ ಪೊಲೀಸರಿದ್ದರು.
ಗಂಗಾವತಿ: ತಾಲೂಕಿನ ಅರಳಹಳ್ಳಿಯ ಸ.ನಂ.73ರ ಒತ್ತುವರಿ ಸರ್ಕಾರಿ ಭೂಮಿಯನ್ನು ಪೊಲೀಸರ ಸಮ್ಮುಖದಲ್ಲಿ ಗುರುವಾರ ಸರ್ವೇ ನಡೆಸಲಾಯಿತು.
ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಉದ್ದೇಶಿತ ಸರ್ವೇ ನಂಬರಿನ 17.05 ಎಕರೆ ಭೂಮಿಯನ್ನು ದಲಿತರಿಗೆ 1977-78ರಲ್ಲಿ ವಿತರಿಸಿದ್ದು, ಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲಾಗಿತ್ತು. ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ದೌರ್ಜನ್ಯಕ್ಕೆ ಮುಂದಾಗಿದ್ದರು. ಈ ಬಗ್ಗೆ ನ್ಯಾಯ ಒದಗಿಸುವಂತೆ ಜಿಲ್ಲಾ ಮಾದಿಗ ಕ್ಷೇಮಾಭಿವೃದ್ಧಿ ಸಂಘದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಸರ್ವೇ ಕೈಗೊಳ್ಳಲಾಯಿತು.
ಕಂದಾಯ ನಿರೀಕ್ಷಕ ಮಹೇಶ ದಲಾಲ್ ಪ್ರತಿಕ್ರಿಯಿಸಿ, ಸರ್ಕಾರಿ ಭೂಮಿಯನ್ನು ದಲಿತರಿಗೆ ವಿತರಿಸಿದ್ದು, ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಾನುಭವಿಗಳು ದೂರು ನೀಡಿದ್ದರು. ಸರ್ವೇಗಾಗಿ ಜಿಲ್ಲಾಡಳಿತ ಸೂಚನೆ ನೀಡಿದ್ದರಿಂದ ಭೂಮಾಪನಾಧಿಕಾರ ಮಹ್ಮದ್ ರಫಿಕ್ ತಂಡದಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಸರ್ವೇ ಕೈಗೊಳ್ಳಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಸಂಘದ ಜಿಲ್ಲಾಧ್ಯಕ್ಷ ಶಿವಪ್ಪ ಮಾದಿಗ ಮಾತನಾಡಿ, ಸರ್ಕಾರದಿಂದಲೇ ಜಾಗ ಮಂಜೂರಾದರೂ ಕೆಲವರು ಕೃಷಿ ಚಟುವಟಿಕೆ ನಡೆಸದಂತೆ ಲಾನುಭವಿಗಳಿಗೆ ತೊಂದರೆ ನೀಡಿದ್ದಾರೆ. ಹೀಗಾಗಿ ಸರ್ವೇ ಕೈಗೊಳ್ಳಲಾಗಿದ್ದು, ಯಾರಿಗೂ ಅನ್ಯಾಯವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು. ಉಪತಹಸೀಲ್ದಾರ್ ಅಬ್ದುಲ್ ರಹೇಮಾನ್, ಗ್ರಾಮಾಡಳಿತಾಧಿಕಾರಿ ರತ್ನಮ್ಮ ಹಾಗೂ ಗ್ರಾಮೀಣ ಪೊಲೀಸರಿದ್ದರು.