ಕನಕಗಿರಿಯ ಕೆಪಿಎಸ್‌ನಲ್ಲಿ ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯಶಿಕ್ಷಕರಾದ ತುಳಜಾ ನಾಯ್ಕ, ವೆಂಕಟ ಮಧುಸೂದನ, ಅಶೋಕ, ವೆಂಕೋಬ ಇತರರಿದ್ದರು.
- ಬಿಇಒ ಎಚ್.ಬಿ.ನಟೇಶ್ ಹೇಳಿಕೆ
- ಸ್ಕೂಲ್ ಪ್ರಾರಂಭೋತ್ಸವ ಪೂರ್ವಭಾವಿ ಸಭೆ
ಕನಕಗಿರಿ: ಶಾಲಾ ಪ್ರಾರಂಭೋತ್ಸವ ಒಂದು ಯಾಂತ್ರಿಕ ಪ್ರಕ್ರಿಯೆ ಎಂದು ಪರಿಗಣಿಸದೇ, ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಪಾಲಕರು ಉತ್ಸಾಹಭರಿತರಾಗಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ನಟೇಶ್ ಹೇಳಿದರು.
ನಗರದ ಕೆಪಿಎಸ್ (ಪ್ರೌಢ ವಿಭಾಗ) ಶಾಲೆಯಲ್ಲಿ ಕನಕಗಿರಿ ವಲಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮುಖ್ಯಶಿಕ್ಷಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜೂ.1ಕ್ಕೆ ಶಾಲೆ ಆರಂಭವಾಗಲಿದ್ದು ಮೇ 29ರಂದು ಶಾಲೆಯಲ್ಲಿ ಸ್ವಚ್ಛತೆ, ಕುಡಿವ ನೀರು, ಶೌಚಗೃಹ ವ್ಯವಸ್ಥೆ, ಸಣ್ಣಪುಟ್ಟ ದುರಸ್ತಿಗಳನ್ನು ಕೈಗೊಳ್ಳಬೇಕು. ಶಾಲಾ ದಾಖಲಾತಿ ಆಂದೋಲನದಡಿ ಜಾಥಾ ನಡೆಸಿ ಮಕ್ಕಳನ್ನು ಶಾಲೆಗೆ ಬರುವಂತೆ ಪ್ರೇರೇಪಿಸಬೇಕು.
ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಎಲ್ಲ ಸಕಿಪ್ರಾ ಶಾಲೆಗಳಲ್ಲಿ 1-5ನೇ ತರಗತಿವರೆಗೆ ದ್ವಿಭಾಷಾ ಬೋಧನೆ ಆರಂಭವಾಗಲಿದ್ದು, ಮಕ್ಕಳು ಸದ್ಬಳಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ಜೂ.1ರಂದು ತಳಿರು ತೋರಣದಿಂದ ಶಾಲೆಯನ್ನು ಅಲಂಕರಿಸಿ ಹಾಜರಾದ ವಿದ್ಯಾರ್ಥಿಗಳಿಗೆ ಸಿಹಿ ಊಟ ನೀಡಬೇಕು. ಅಂದು ಪಾಲಕರು ಹಾಗೂ ಶಿಕ್ಷಕರ ಸಭೆ ಕರೆದು ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ವಸ್ತ್ರದ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರೋಷಣ್ಣ, ಬಿಆರ್‌ಪಿ ಗೀತಾ, ಸಿಆರ್‌ಪಿ ಎಂ.ಆರ್.ರಾಜೀವ್ ಇತರರಿದ್ದರು.