ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ವಿದ್ಯುತ್ ಪ್ರಸರಣ ಕೇಂದ್ರದ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಲ್ಲಪ್ಪ, ಶರಣಪ್ಪ, ಹನುಮಂತ, ಭೀಮಣ್ಣ, ಶರಣಪ್ಪ, ಕೊಟ್ರೇಶ, ಏಳುಕೋಟೇಶ, ಹನಕುಂಟಿ, ಮೊರನಾಳ, ಮತ್ತೂರ ಗ್ರಾಮದ ರೈತರು ಇದ್ದರು.
- ಅಳವಂಡಿ ಬೆಟಗೇರಿ ರೈತರ ಪ್ರತಿಭಟನೆ
- ಮೊದಲಿನಂತೆ ಪೂರೈಕೆ ಮಾಡಬೇಕೆಂದು ಒತ್ತಾಯ
ಅಳವಂಡಿ: ಕೃಷಿ ಚಟುವಟಿಕೆಗೆ ಹಗಲಿನಲ್ಲಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಸಮೀಪದ ಬೆಟಗೇರಿ ಗ್ರಾಮದ ವಿದ್ಯುತ್ ಪ್ರಸರಣ ಕೇಂದ್ರದ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಮೊದಲು ಕೃಷಿ ಚಟುವಟಿಕೆಗೆ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ವಿದ್ಯುತ್ ಪೂರೈಸಲಾಗುತ್ತಿತ್ತು. ಇದರಿಂದ ರೈತರಿಗೆ ಅನುಕೂಲವಾಗಿತ್ತು. ಇದೀಗ ಬೆಳಗಿನ ಜಾವ 3 ರಿಂದ ಬೆಳಗ್ಗೆ 10 ಗಂಟೆವರೆಗೆ ವಿದ್ಯುತ್ ನೀಡುತ್ತಿರುವುದರಿಂದ ರೈತರಿಗೆ ಅನಾನುಕೂಲವಾಗಿದ್ದು, ಮೊದಲಿನಂತೆ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಎಸ್‌ಒ ಅಮಾಜಪ್ಪ ಕುರಿ ಮಾತನಾಡಿ, ತುಂಗಭದ್ರಾ ಜಲಾಶಯದ ಹಿನ್ನೀರು ಖಾಲಿಯಾದಂತೆ ಪಂಪ್‌ಸೆಟ್‌ಗಳ ಬಳಕೆ ಜಾಸ್ತಿಯಾಗುತ್ತದೆ. ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗಿ ಓವರ್‌ಲೋಡ್ ಆಗುತ್ತಿರುವ ಕಾರಣ ಸಮಯ ಬದಲಿಸಲಾಗಿತ್ತು. ಈಗ ರೈತರ ಬೇಡಿಕೆಯಂತೆ ವಿದ್ಯುತ್ ಪೂರೈಸಲಾಗುವುದು. ಒಂದು ವೇಳೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾದರೆ ಬೆಳಗ್ಗೆ 4ರಿಂದ 11 ಗಂಟೆವರೆಗೆ ವಿದ್ಯುತ್ ಪೂರೈಸಲಾಗುವುದು. ಇದಕ್ಕೆ ರೈತರು ಸಹಕರಿಸಬೇಕು ಎಂದರು.
ಪಿಎಸ್‌ಐ ಪ್ರಹ್ಲಾದ ನಾಯಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸಮಸ್ಯೆ ಪರಿಹರಿಸುವಲ್ಲಿ ಶ್ರಮಿಸಿದರು. ಪ್ರಮುಖರಾದ ಮಲ್ಲಪ್ಪ ಯತ್ನಳ್ಳಿ, ಶರಣಪ್ಪ ಮತ್ತೂರು, ಹನಮಂತ ಬೆಲಡಗಿ, ಭೀಮಣ್ಣ ಕವಲೂರು, ಶರಣಪ್ಪ ಭಾವಿ, ಕೊಟ್ರೇಶ ಗೊರೇಬಾಳ, ಏಳುಕೋಟೇಶ, ಹನಕುಂಟಿ, ಮೊರನಾಳ, ಮತ್ತೂರ ಗ್ರಾಮದ ರೈತರು ಭಾಗಿಯಾಗಿದ್ದರು.