ದೇವರಾಜ್ 
ಕೊಪ್ಪಳ

ಕೌದಿಯಲ್ಲಿ ಶವಸುತ್ತಿ ಸುಟ್ಟು ಹಾಕಿದ ದುರುಳರು

ಪ್ರಮುಖ ಮುಖ್ಯಾಂಶಗಳು

  • ಆಸ್ತಿಗಾಗಿ ಮಾವನೊಂದಿ ಸೇರಿ ತಮ್ಮನನ್ನು ಕೊಲೆಗೈದ ಅಣ್ಣ
ಕನಕಗಿರಿ: ವ್ಯಕ್ತಿಯನ್ನು ಕೊಲೆ ಮಾಡಿದ್ದಲ್ಲದೇ, ಸಾಕ್ಷ್ಯ ನಾಶಕ್ಕಾಗಿ ತಾಲೂಕಿನ ಚಿರ್ಚನಗುಡ್ಡ ತಾಂಡಾದ ಗುಡ್ಡದಲ್ಲಿ ಶವವನ್ನು ಸುಟ್ಟು ಹಾಕಿದ ಪ್ರಕರಣವನ್ನು ಸ್ಥಳೀಯ ಪೊಲೀಸರು ಬೇಧಿಸಿದ್ದು, ಆಸ್ತಿಗಾಗಿ ಅಣ್ಣ ಹಾಗೂ ಮಾವನೇ ಕೊಲೆಗೈದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕೇಸರಹಟ್ಟಿ ಗ್ರಾಮದ ಅವಿವಾಹಿತ 33 ವರ್ಷದ ದೇವರಾಜ ಮಾ.ಪಾ. ಕೊಲೆಯಾದ ವ್ಯಕ್ತಿ. ಈತ ಆಸ್ತಿಗಾಗಿ ಆಗಾಗ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಜೂ.28ರ ರಾತ್ರಿ ಕುಡಿದು ಮನೆಗೆ ಬಂದ ದೇವರಾಜ, ಹಣ, ಆಸ್ತಿಗಾಗಿ ಗಲಾಟೆ ಮಾಡುತ್ತಿದ್ದಾಗ ಅಣ್ಣನಾದ ಅಯ್ಯನಗೌಡ, ಮಾವನಾದ ಉಪ್ಪಿನ ಬೆಟಗೇರಿಯ ಗಂಗಾಧರ ಮಾ.ಪಾ. ಹೊಡೆದಿದ್ದು, ಸ್ಥಳದಲ್ಲಿಯೇ ದೇವರಾಜ ಮೃತಪಟ್ಟಿದ್ದಾನೆ. ಆಗ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಆರೋಪಿಗಳು ಶವವನ್ನು ಕೌದಿಯಲ್ಲಿ ಸುತ್ತಿಕೊಂಡು ಬೈಕ್‌ನಲ್ಲಿ ಚಿರ್ಚನಗುಡ್ಡ ತಾಂಡಾದ ಗುಡ್ಡಕ್ಕೆ ತಂದು ಪೆಟ್ರೋಲ್ ಸುರಿದು ಸುಟ್ಟಿರುವುದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.
ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಜು.5ರಂದು ತಡರಾತ್ರಿ ಶವ ದೊರೆತ ಬಳಿಕ ಪ್ರಕರಣದ ತನಿಖೆಗಾಗಿ 2 ತಂಡಗಳನ್ನು ರಚಿಸಲಾಗಿತ್ತು. ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಬಳಸಿದ ಬೈಕ್ ಹಾಗೂ ಕೊಲೆಯಾದ ವ್ಯಕ್ತಿಯ ಮೊಬೈಲ್ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ ತಿಳಿಸಿದ್ದಾರೆ.