ಗಂಗಾವತಿ ಉಪವಿಭಾಗ ಆಸ್ಪತ್ರೆಯ ಧನ್ವಂತರಿ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ತಾಲೂಕು ಘಟಕದ ವಾರ್ಷಿಕ ಮಹಾಸಭೆಯನ್ನು ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್ ಗುರುವಾರ ಉದ್ಘಾಟಿಸಿದರು. ತಾಲೂಕಾಧ್ಯಕ್ಷ ಶಿವಶಂಕರ ಕಲ್ಮಠ, ಪದಾಧಿಕಾರಿಗಳಾದ ಶರಣಪ್ಪ ಹಕ್ಕಂಡಿ, ಬಿಇಒ ಎಚ್.ಬಿ.ನಟೇಶ, ಡಾ.ಈಶ್ವರ ಸವಡಿ ಇತರರಿದ್ದರು. 
ಕೊಪ್ಪಳ

ಕೇಂದ್ರ ಮಾದರಿ ಸೌಲಭ್ಯ ಕೊಡಿಸಲು ಯತ್ನ

ಗಂಗಾವತಿ: ನೌಕರರ ಬೇಡಿಕೆಗಳನ್ನು ಹೋರಾಟದ ಮೂಲಕ ಈಡೇರಿಸಲಾಗಿದ್ದು, ಕೇಂದ್ರದ ಮಾದರಿಯಲ್ಲಿ ಸೌಲಭ್ಯಗಳನ್ನು ನೌಕರರಿಗೆ ಕೊಡಿಸಲು ಯತ್ನಿಸಲಾಗುತ್ತಿದೆ ಎಂದು ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್ ಹೇಳಿದರು.
ನಗರದ ಉಪವಿಭಾಗ ಆಸ್ಪತ್ರೆಯ ಧನ್ವಂತರಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಚಿಕಿತ್ಸೆಗೊಳಗಾಗುವ ನೌಕರರಿಗೆ ವೇತನ ಸಹಿತ ರಜೆ ಮಂಜೂರು ಮಾಡಿಸಲಾಗಿದ್ದು, ಕೇಂದ್ರದ ಮಾದರಿ ವೇತನ, ಇತರ ಭತ್ಯೆ ಕೊಡಿಸಲು ಯತ್ನಿಸಲಾಗುವುದು. ಎನ್‌ಪಿಎಸ್‌ನಿಂದ ಓಪಿಎಸ್ ಯೋಜನೆ ಜಾರಿಗೊಳಿಸಲು ಹೋರಾಟ ಮುಂದುವರಿದಿದೆ ಎಂದರು.
ಸಂಘದ ತಾಲೂಕಾಧ್ಯಕ್ಷ ಶಿವಶಂಕರ ಕಲ್ಮಠ ಮಾತನಾಡಿ, ಸಂಘಟನೆ ಮತ್ತು ಹೋರಾಟದ ಜತೆಗೆ ಕ್ರಿಯಾಶೀಲ ಚಟುವವಟಿಕೆಗಳನ್ನು ಸಂಘಟನೆಯಿಂದ ಹಮ್ಮಿಕೊಂಡಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ಕೊಡಿಸಲಾಗಿದೆ. ರಾಜ್ಯ ಘಟಕದ ಹೊಸ ಆಡಳಿತ ಮಂಡಳಿ ಯತ್ನದಿಂದ ನೌಕರರಿಗೆ ಅನುಕೂಲವಾಗಿರುವ 25ಕ್ಕೂ ಹೆಚ್ಚು ಆದೇಶಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.