ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಡಿಸಿ ಡಾ. ಸುರೇಶ ಬಿ. ಇಟ್ನಾಳ ಉದ್ಘಾಟಿಸಿದರು. ನ್ಯಾ. ಮಹಾಂತೇಶ ಎಸ್. ದರಗದ, ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ಡಿಡಿಪಿಐ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಪರ ಉಪನಿರ್ದೇಶಕ ಅಮರೇಶ ಇದ್ದರು.
- ಡಿಸಿ ಡಾ. ಸುರೇಶ ಇಟ್ನಾಳ ಅಭಿಪ್ರಾಯ
- ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ
ಕೊಪ್ಪಳ : ಕಡ್ಡಾಯ ಶಿಕ್ಷಣ ಪ್ರತಿಯೊಬ್ಬ ಮಗುವಿನ ಕಾನೂನುಬದ್ಧವಾದ ಹಕ್ಕಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರಿಂದ ಮಾತ್ರ ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆ ಸಾಧ್ಯವಾಗುತ್ತದೆ ಎಂದು ಡಿಸಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ, ಮಕ್ಕಳ ಮಕ್ಕಳ ಬಾಲ್ಯವನ್ನು ಕಸಿದುಕೊಂಡಂತಾಗುತ್ತದೆ. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಗಮನ ಹರಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಮಾಡಿ, ಪುನ@ ಶಾಲೆಗೆ ಸೇರಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಬಾಲಕಾರ್ಮಿಕ ಪದ್ಧತಿ ತಡೆಗಟ್ಟಬಹುದು. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಯಾವುದೇ ಕ್ಷೇತ್ರಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮೂಲಕ ದೂರು ನೀಡಿ, ಮಕ್ಕಳ ರಕ್ಷಣೆ ಮಾಡಬೇಕೆಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಮಾತನಾಡಿ, ಮಕ್ಕಳಿಗೆ ಅವರ ಹಕ್ಕುಗಳನ್ನು ನೀಡುವುದು ತಂದೆ-ತಾಯಿ ಮತ್ತು ಸಮಾಜದ ಕರ್ತವ್ಯವಾಗಿದೆ. 14 ವರ್ಷದವರೆಗೆ ಮಕ್ಕಳಿಗೆ ಊಟ, ಆಟ, ಪಾಠವನ್ನು ಅವರ ಇಚ್ಛೆಯಂತೆ ಬದುಕು ನೀಡಬೇಕು. ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಂಡಲ್ಲಿ 2 ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಮಕ್ಕಳು ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಸಮಾಜವನ್ನು ರೂಪಿಸಬೇಕು. ಸಮಾಜದ ಅನಿಷ್ಠವಾದ ಬಾಲ ಕಾರ್ಮಿಕ ಪದ್ದತಿ ನಿಮೂರ್ಲನೆಗಾಗಿ ಎಲ್ಲರೂ ಶ್ರಮೀಸಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಮಾತನಾಡಿ, ಬಾಲಕಾರ್ಮಿ ಪದ್ಧತಿಯಿಂದ ದೇಶದ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿ ಕುಂಠಿತವಾಗುತ್ತದೆ. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ಕಟ್ಟುನಿಟ್ಟಾಗಿ ಕೊನೆಗೊಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಡಿಡಿಪಿಐ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಪರ ಉಪನಿರ್ದೇಶಕ ಅಮರೇಶ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ಜಿಲ್ಲಾ ಯೋಜನೆ-ಯುನಿಸೆಫ್ ಸಂಯೋಜಕ ಹರೀಶ ಜೋಗಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಇತರರಿದ್ದರು.
ಬಾಲಕಾರ್ಮಿಕ ಮುಕ್ತ ಮಕ್ಕಳಿಗೆ ಬಾಂಡ್ ವಿತರಣೆ
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಿಹೊಂದಿ, ಶಾಲೆಗೆ ದಾಖಲಾಗಿ 10ನೇ ತರಗತಿಯಲ್ಲಿ ಶೇ 75ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 2000ಗಳ ಪ್ರೋತ್ಸಾಹ ಧನ ಚೆಕ್ ನೀಡಲಾಯಿತು. ಬಾಲಕಾರ್ಮಿಕತೆಯಿಂದ ಮುಕ್ತರಾದ ಮಕ್ಕಳಿಗೆ ಮಾಲೀಕರಿಂದ ಬಾಲಕಾರ್ಮಿಕ ಕಲ್ಯಾಣ ನಿಧಿಗೆ ವಸೂಲಿ ಮಾಡಿ, ಜಮಾ ಮಾಡಿದ 20 ಸಾವಿರ ಕಾರ್ಪಸ್ ನಿಧಿ ಹಾಗೂ 15 ಸಾವಿರ ಸರ್ಕಾರದ ವಂತಿಕೆ ಸೇರಿ 35 ಸಾವಿರ ಮೌಲ್ಯದ ಬಾಂಡ್ಗಳನ್ನು ವಿತರಿಸಿ ಸನ್ಮಾನಿಸಲಾಯಿತು.