ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ಚಾಲನೆಗೆ ಸಿದ್ಧಗೊಂಡ ವೇದಿಕೆಯನ್ನು ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಶಿವರಾಜ್ ತಂಗಡಗಿ ಪರಿಶೀಲಿಸಿದರು. ಕೊಪ್ಪಳ ಹಾಗೂ ವಿಜಯನಗರ ಡಿಸಿ, ಎಸ್ಪಿಗಳಿದ್ದರು. 
ಕೊಪ್ಪಳ

ಕ್ರಸ್ಟ್‌ಗೇಟ್‌ಗಳ ಚಾಲನೆಗೆ ದಿನಗಣನೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸಿದ್ಧತಾ ಕಾರ್ಯ ಬಹುತೇಕ ಪೂರ್ಣ
  • ಮೂರು ರಾಜ್ಯಗಳ ಸಿಎಂ ಆಗಮನ
ಮುನಿರಾಬಾದ್: ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ಚಾಲನೆಗೆ ದಿನಗಣನೆ ಶುರುವಾಗಿದ್ದು ಸಿದ್ಧತಾ ಕಾರ್ಯವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೋಮವಾರ ಪರಿಶೀಲಿಸಿದರು. ಜೂ.25ರಂದು ನಡೆವ ಕಾರ್ಯಕ್ರಮಕ್ಕೆ ಕರ್ನಾಟಕ ಸೇರಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆಗಳು ಜೋರಾಗಿ ನಡೆದಿವೆ.

ಜರ್ಮನ್ ಟೆಂಟ್ ನಿರ್ಮಾಣ

ಮುಖ್ಯ ವೇದಿಕೆಗೆ ಮಳೆ ಹಾಗೂ ಗಾಳಿಗೆ ಧಕ್ಕೆ ಬಾರದಂತೆ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ವಾಟರ್‌ಪ್ರೂಫ್ ಪೆಂಡಾಲ್ (ಟೆಂಟ್)ಅಳವಡಿಸಲಾಗುತ್ತಿದ್ದು, ಸಕಲ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.

ರಸ್ತೆಗಳಿಗೆ ಅಭಿವೃದ್ಧಿ ಕಳೆ

ವಿವಿಐಪಿಗಳ ಭೇಟಿ ಹಿನ್ನೆಲೆಯಲ್ಲಿ ಮುನಿರಾಬಾದ್ ಹಾಗೂ ಜಲಾಶಯ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ಮುನಿರಾಬಾದ್ ಇಂಡಿಯನ್ ರಿಸರ್ವ್ ಪೊಲೀಸ್ ಬೆಟಾಲಿಯನ್ ಆವರಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ, ಸಂಪರ್ಕ ರಸ್ತೆಗಳ ಡಾಂಬರೀಕರಣ ಹಾಗೂ ದುರಸ್ತಿ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆದಿವೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಗಮನದಿಂದಾಗಿ ಇಡೀ ಮುನಿರಾಬಾದ್ ಕಂಗೊಳಿಸುತ್ತಿದೆ.

ಸಂಸದ ಮತ್ತು ಶಾಸಕರು

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಶಾಸಕ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಕೊಪ್ಪಳ ಮತ್ತು ವಿಜಯನಗರದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿಯಾಗಿ ಹೈಸ್ಕೂಲ್ ಮೈದಾನ, ಹೆಲಿಪ್ಯಾಡ್ ಹಾಗೂ ಜಲಾಶಯ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭದ್ರತೆ, ಪಾಕಿರ್ಂಗ್ ವ್ಯವಸ್ಥೆ, ವಿವಿಐಪಿಗಳ ಪ್ರವೇಶ ಹಾಗೂ ಸಾರ್ವಜನಿಕರ ಆಸನ ವ್ಯವಸ್ಥೆ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಕೊಪ್ಪಳ ಡಿಸಿ ಡಾ.ಸುರೇಶ.ಬಿ ಹಿಟ್ನಾಳ, ವಿಜಯನಗರ ಡಿಸಿ ಕವಿತಾ ಬನ್ನೀಕೇರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.