ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಿಂದ ಮುಂಡರಗಿಗೆ ತೆರಳುವ ರಸ್ತೆ ಹದಗೆಟ್ಟಿರುವುದು.
ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಿಂದ ಮುಂಡರಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.
ಕೊಪ್ಪಳ ತಾಲೂಕಿನ ಕಟ್ಟ ಕಡೆಯ ಹಳ್ಳಿ ಘಟ್ಟಿರಡ್ಡಿಹಾಳ ಸುಮಾರು 1,500 ಜನಸಂಖ್ಯೆಯನ್ನು ಹೊಂದೆ. ವಾಣಿಜ್ಯ, ಶಿಕ್ಷಣ, ವ್ಯಾಪಾರ, ವಹಿವಾಟುಗಳನ್ನು ಪಕ್ಕದ ಗದಗ ಜಿಲ್ಲೆಯ ಮುಂಡರಗಿ ನಗರವನ್ನು ಅವಲಂಬಿಸಿದೆ. ಗ್ರಾಮದಿಂದ ಮುಂಡರಗಿ ಕೇವಲ 6 ಕಿ.ಮೀ.ರಸ್ತೆಯನ್ನು ಹೊಂದಿದೆ. ಇದರಲ್ಲಿ ಮುಂಡರಗಿ ತಾಲೂಕಿಗೆ 4.5 ಕಿ.ಮೀ ಇದ್ದು ಉಳಿದ 1.5 ಕಿಮೀ ಕೊಪ್ಪಳ ತಾಲೂಕಿಗೆ ಸೇರಿದೆ. ವಿಪರ್ಯಾಸವೆಂದರೆ ಮುಂಡರಗಿ ಭಾಗದಲ್ಲಿ ರಸ್ತೆ ಲೋಕೊಪಯೋಗಿ ಇಲಾಖೆಗೆ ಸೇರಿದ್ದು ಜಿಲ್ಲಾ ಮುಖ್ಯ ರಸ್ತೆಯಾಗಿದೆ. ಪ್ರತಿ ವರ್ಷವೂ ದುರಸ್ತಿ ಮಾಡಲಾಗುತ್ತಿದೆ. ಆದರೆ ಕೊಪ್ಪಳ ಭಾಗದಲ್ಲಿನ ರಸ್ತೆ ಸ್ವಾತಂತ್ರ ಬಂದ ಮೇಲೆ ಒಂದು ಬಾರಿ ಸುಮಾರು 25 ವರ್ಷಗಳ ಹಿಂದೆ ಡಾಂಬರೀಕರಣ ಮಾಡಿದ್ದು. ನಂತರದ ದಿನಗಳಲ್ಲಿ ಈ ರಸ್ತೆಯ ಬಗ್ಗೆ ಯಾವುದೇ ಇಲಾಖೆ ಗಮನ ಹರಿಸಿಲ್ಲ. ರಸ್ತೆ ದುರಸ್ತಿ ಬಗ್ಗೆ ಸುಮಾರು ವರ್ಷಗಳಿಂದಲೂ ಶಾಸಕರು, ಜಿಲ್ಲಾಧಿಕಾರಿಗಳಿಗೆ ಮತ್ತು ಸಿಇಒಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಘಟ್ಟಿರಡ್ಡಿಹಾಳ-ಮುಂಡರಗಿ ರಸ್ತೆ ಬದಿ ಮುಳ್ಳುಕಂಟಿ ಬೆಳೆದಿರುವುದು.
ಈ ರಸ್ತೆಯಲ್ಲಿ ನಿತ್ಯ ನೂರಾರು ದ್ವಿಚಕ್ರ, ಆಟೋ, ಬಸ್, ಲಾರಿಗಳು ಸಂಚರಿಸುತ್ತವೆ. ಯಲಬುರ್ಗಾ, ಕುಕನೂರು, ಬನ್ನಿಕೊಪ್ಪ ಕಡೆಯಿಂದ ಕವಲೂರು ಮಾರ್ಗವಾಗಿ ಮುಂಡರಗಿ ಕಡೆ ತೆರಳುವ ರಸ್ತೆ ಇದಾಗಿದೆ. ರಸ್ತೆಯ ಅಕ್ಕಪಕ್ಕ ಕೆಲವೆಡೆ ಮುಳ್ಳುಕಂಟಿಗಳು ಬೆಳೆದಿದ್ದು ಕೇವಲ ಒಂದು ವಾಹನ ಸಂಚರಿಸಲು ಮಾತ್ರ ಜಾಗ ಇದೆ ಎದುರುಗಡೆ ವಾಹನ ಬಂದರೆ ಪಕ್ಕಕ್ಕೆ ಸರಿದು ನಿಲ್ಲಲು ಜಾಗ ಇಲ್ಲದಂತಾಗಿದೆ. ರಸ್ತೆ ಬಹುತೇಕ ಹಾಳಾಗಿದ್ದು ಜಲ್ಲಿಕಲ್ಲು ಗಳು ಕಿತ್ತಿವೆ. ರಸ್ತೆಯಲ್ಲಿ ಗುಂಡಿಗಳು ದೊಡ್ಡದಾಗಿದ್ದು ವಾಹನಗಳು ಸಂಚರಿಸಲು ಪರದಾಡಬೇಕಾಗುತ್ತಿದೆ. ರಸ್ತೆ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ ಪ್ರಯಾಣಿಕರು. ಮಳೆಗಾಲ ಬಂತೆಂದರೆ ರಸ್ತೆ ಗುಂಡಿಗಳಲ್ಲಿ ನೀರು ನಿಂತು ರಸ್ತೆಯ ಗುಂಡಿಯ ಆಳ ತಿಳಿಯದೇ ಪ್ರಯಾಣಿಕರು ಬಿದ್ದಿದ್ದಾರೆ.
ಸುಳ್ಳಾದ ಡಿಸಿ ವಾಗ್ದಾನ
ರಸ್ತೆ ದುರಸ್ತಿ ಸಂಬಂಧ ಕಳೆದ ಬಾರಿಯ ಲೋಕಸಭೆ ಮತದಾನ ಬಹಿಷ್ಕಾರ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದರು. ಆದರೆ ಜಿಲ್ಲಾಧಿಕಾರಿ ರಸ್ತೆ ದುರಸ್ತಿ ಬಗ್ಗೆ ವಾಗ್ದಾನ ಮಾಡಿದ್ದರೂ ಅದು ಇನ್ನು ನೆರವೇರಿಲ್ಲ. ಕಳೆದ ವರ್ಷ ಸ್ವಲ್ಪ ಮಣ್ಣು ಹಾಕಿದ್ದು ಬಿಟ್ಟರೆ ಇದುವರೆಗೂ ರಸ್ತೆ ದುರಸ್ತಿಯಾಗಿಲ್ಲ.
ಶಾಶ್ವತ ಪರಿಹಾರಕ್ಕೆ ಕ್ರಮವಾಗಲಿ
ಘಟ್ಟಿರಡ್ಡಿಹಾಳ-ಮುಂಡರಗಿ ಸಂಪರ್ಕ ಕಲ್ಪಿಸುವ ರಸ್ತೆ ಜಿಪಂ ವ್ಯಾಪ್ತಿಗೆ ಬರುತ್ತದೆ. ಜಿಪಂನವರು ರಸ್ತೆ ದುರಸ್ತಿ ಮಾಡಿಸುತ್ತಿಲ್ಲ. ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸಿದಲ್ಲಿ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಶಾಸಕರು ಗಮನ ಹರಿಸಿ ಲೋಕೋಪಯೋಗಿ ಇಲಾಖೆಗೆ ಸೇರಿಸಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕಾಗಿದೆ.
ಘಟ್ಟಿರಡ್ಡಿಹಾಳ ಗ್ರಾಮದಿಂದ ಮುಂಡರಗಿಗೆ ತೆರಳುವ ರಸ್ತೆಯನ್ನು ಕೊಪ್ಪಳ ತಾಲೂಕಿನ ಸರಹದ್ದಿನವರೆಗೆ ದುರಸ್ತಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಗುವುದು.
ಘಟ್ಟಿರಡ್ಡಿಹಾಳ ಗ್ರಾಮದಿಂದ ಮುಂಡರಗಿಗೆ ತೆರಳುವ ರಸ್ತೆ ಮುಂಡರಗಿ ಭಾಗದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಕೊಪ್ಪಳ ತಾಲೂಕಿಗೆ ಸಂಬಂಧಪಟ್ಟ 1.5 ಕಿ.ಮೀ ರಸ್ತೆಯನ್ನು ಶಾಸಕರು ಲೋಕೋಪಯೋಗಿ ಇಲಾಖೆಗೆ ಸೇರಿಸಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಸದ್ಯ ರಸ್ತೆಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.