ಗಂಗಾವತಿ ದೇವರಾಜ ಅರಸು ಮೆಟ್ರಿಕ್ ನಂತರ ಮೆಡಿಕಲ್ ಮತ್ತು ಇಂಜಿನಿಯರ್ ಕಾಲೇಜುಗಳ ಮಹಿಳಾ ವಸತಿ ನಿಲಯಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ಕೆ.ನಾಗಲಕ್ಷ್ಮೀ ಚೌಧರಿ ಗುರುವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಿಂದುಳಿದ ವರ್ಗದ ಇಲಾಖೆ ಉಪನಿರ್ದೇಶಕ ನಾಗಮಣಿ, ತಾಪ ಇಒ ರಾಮರೆಡ್ಡಿ ಪಾಟೀಲ್, ಪಿಐ ಪ್ರಕಾಶ ಮಾಳೆ ಇತರರಿದ್ದರು. 
ಕೊಪ್ಪಳ

ವಸತಿ ಶಾಲೆಯಲ್ಲಿ ಸೌಕರ್ಯಗಳ ಕೊರತೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ಕ್ರಮ
  • ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ಕೆ.ನಾಗಲಕ್ಷ್ಮೀ ಚೌಧರಿ ಹೇಳಿಕೆ
ಗಂಗಾವತಿ: ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ಕೆ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದ ದೇವರಾಜ ಅರಸು ಮೆಟ್ರಿಕ್ ನಂತರದ ಮೆಡಿಕಲ್ ಮತ್ತು ಇಂಜಿನಿಯರ್ ಕಾಲೇಜುಗಳ ಮಹಿಳಾ ವಸತಿ ನಿಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. ವಸತಿ ಶಾಲೆಯಲ್ಲಿನ ಮಕ್ಕಳಿಗೆ ಸರ್ಕಾರ ಎಲ್ಲ ಹಂತದ ಸೌಲಭ್ಯ ನೀಡುತ್ತಿದ್ದು, ಕೆಲವೆಡೆ ಕೊರತೆಯಿರುವ ಬಗ್ಗೆ ಪರಿಶೀಲನೆ ವೇಳೆ ಕಂಡು ಬಂದಿದೆ. ಕನಿಷ್ಠ ಸೌಲಭ್ಯಗಳಾದ ಕುಡಿವ ನೀರು ಮತ್ತು ಶೌಚಗೃಹ ವ್ಯವಸ್ಥೆಯೂ ಇಲ್ಲದಿರುವುದು ಕಂಡು ಬಂದಿದೆ. ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಸರಿಪಡಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ದೂರು ನೀಡಲು ಹಿಂಜರಿಯಬೇಡಿ
ವಿದ್ಯಾರ್ಥಿನಿರಯ ಹಾಸ್ಟೆಲ್‌ಗಳಲ್ಲಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದ್ದು, ಮೊಬೈಲ್ ಬಳಕೆ ಬಿಟ್ಟು ಓದಿನತ್ತ ಗಮನಹರಿಸಿ. ಶಿಕ್ಷಣದಿಂದ ಎಲ್ಲವನ್ನೂ ಪಡೆಯಬಹುದಾಗಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೊಳಪಡಬೇಕು. ಲೋಪ ಕಂಡು ಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತನ್ನಿ, ಇಲ್ಲವೇ ಸಹಾಯವಾಣಿಗೆ ಕರೆ ಮಾಡಿ. ಹಿಂದುಳಿದವರ್ಗದ ಸಚಿವರ ಕ್ಷೇತ್ರದಲ್ಲಿ ಸಮಸ್ಯೆಗಳಿರುವ ಬಗ್ಗೆ ಗೊತ್ತಾಗಿದ್ದು, ಅವರ ಗಮನಕ್ಕೆ ತರುವೆ ಎಂದರು.
ಹಾಸ್ಟೆಲ್‌ನಲ್ಲಿ ಸಹಾಯವಾಣಿ ಸೇರಿ ಸಂಬಂಧಪಟ್ಟ ಅಧಿಕಾರಿಗಳ ನಂಬರ್‌ಗಳನ್ನು ಹಾಕಬೇಕು. ಪೌಷ್ಟಿಕ ಆಹಾರಗಳನ್ನೇ ನೀಡಬೇಕಿದ್ದು, ಆರೋಗ್ಯ ತಪಾಸಣೆಗೆ ಆದ್ಯತೆ ನೀಡಿ ಎಂದು ವಸತಿ ಮೇಲ್ವಿಚಾರಕರಿಗೆ ಸೂಚನೆ ನೀಡಿದರು. ಹಿಂದುಳಿದ ವರ್ಗದ ಇಲಾಖೆ ಉಪನಿರ್ದೇಶಕಿ ನಾಗಮಣಿ, ವಿಸ್ತೀರ್ಣಾಧಿಕಾರಿ ಉಷಾ ಮುಜುಂದಾರ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ನಗರ ಪಿಐ ಪ್ರಕಾಶ ಮಾಳೆ, ಸಿಡಿಪಿಒ ಜಯಶ್ರೀ ರಾಜಪುರೋಹಿತ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್ ಇತರರಿದ್ದರು.

ಸಚಿವರ ಕ್ಷೇತ್ರದಲ್ಲಿ ಸಮಸ್ಯೆಗಳ ಆಗರ

ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಕ್ಷೇತ್ರದ ಹಾಸ್ಟೆಲ್‌ನಲ್ಲಿ ಸಮಸ್ಯೆಗಳಿರುವುದನ್ನು ಕಂಡು ದಂಗಾಗಿದ್ದು, ಉತ್ತರಿಸದೇ ಮೌನಕ್ಕೆ ಜಾರಿದರು. ಸಚಿವರ ಗಮನಕ್ಕಿಲ್ಲ ಅನ್ನಿಸುತ್ತೆ, ಗೊತ್ತಿದ್ದರೆ ಸರಿ ಮಾಡುತ್ತಿದ್ದರೂ ಎಂದು ಹಾರಿಕೆ ಉತ್ತರ ನೀಡಿದರು. ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿ ಜಾರಿಕೊಂಡರು. ತಾಲೂಕಿನ ಚಿಕ್ಕಜಂತಕಲ್ ಶೌಚಗೃಹ ಪ್ರಕರಣದ ಬಗ್ಗೆ ಮಾಹಿತಿ ಇಲ್ಲದಂತೆ ವರ್ತಿಸಿದರು. ಮಕ್ಕಳಿಗೆ ಶಿಕ್ಷಣದ ಹಿತವಚನ ನೀಡಿ ಹಾಸ್ಟೆಲ್ ಊಟ ಸವಿದರು