ಕೊಪ್ಪಳ ತಾಲೂಕಿನ ಹಲಗೇರಿ ಸರ್ಕಾರಿ ಶಾಲೆಗೆ 2 ಎಕರೆ ಭೂಮಿ ದಾನ ನೀಡಿದ ವಿರಾಪೂರದ ನಿಂಗಪ್ಪ ಉಳ್ಳಾಗಡ್ಡಿ ಅವರಿಗೆ ಶಾಲೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಶಂಭುಲಿಂಗನಗೌಡ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ಓಜನಳ್ಳಿ ಇತರರಿದ್ದರು.
- ನಿಂಗಪ್ಪ ಉಳ್ಳಾಗಡ್ಡಿ ಸೇವೆ ಶ್ಲಾಘನೀಯ
ಕೊಪ್ಪಳ: ತಾಲೂಕಿನ ಹಲಗೇರಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಸ್ತರಣೆಗೆ ವಿರಾಪೂರದ ಹಿರಿಯರಾದ ನಿಂಗಪ್ಪ ಉಳ್ಳಾಗಡ್ಡಿ ಅವರು ತಮ್ಮ 2 ಎಕರೆ ಬೆಲೆಬಾಳುವ ಜಮೀನನ್ನು ಉಚಿತವಾಗಿ ದಾನ ಮಾಡಿದ್ದಾರೆ.
ಭೂಮಿಯನ್ನು ರಾಜ್ಯಪಾಲರ ಹೆಸರಿಗೆ ಹಸ್ತಾಂತರಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ದಾನಿಯನ್ನು ಗ್ರಾಮಸ್ಥರು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಶಂಭುಲಿಂಗನಗೌಡ ಪಾಟೀಲ್ ಮಾತನಾಡಿ, ಈ ಭೂಮಿಯಲ್ಲಿ ಶಾಲಾ ಕೊಠಡಿಗಳು, ಗ್ರಂಥಾಲಯ ಹಾಗೂ ಆಟದ ಮೈದಾನ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಈ ದಾನವು ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್ ಓಜನಳ್ಳಿ, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು.