ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಜನವಸತಿ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಗೃಹ ಬಳಕೆ ಅನಿಲದ ಸಂಗ್ರಹ ಘಟಕಕ್ಕೆ ಪರವಾನಗಿ ನೀಡದಂತೆ ಒತ್ತಾಯಿಸಿ ನಿರ್ಮಾಣ ಹಂತದ ಘಟಕದ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಬಳ್ಳಾರಿ ರಾಮಣ್ಣನಾಯಕ, ಪ್ರಮುಖರಾದ ಟಿ.ರಘು, ವೆಂಕಟೇಶ್ವರಾವ್, ಜಿ.ರಾಜೇಶ, ಎನ್.ನಾಗೇಶ್ವರರಾವ್, ಎ.ಮುರುಳೀಕೃಷ್ಣ ಇತರರಿದ್ದರು.
- ಪಿಡಿಒ ಸುರೇಶ ಛಲವಾದಿಗೆ ಮನವಿ
- ಗ್ರಾಮಸ್ಥರ ಒತ್ತಾಯ
ಗಂಗಾವತಿ: ತಾಲೂಕಿನ ವಡ್ಡರಹಟ್ಟಿಯ ಜನವಸತಿ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಗೃಹ ಬಳಕೆ ಅನಿಲದ ಸಂಗ್ರಹ ಘಟಕಕ್ಕೆ ಪರವಾನಗಿ ನೀಡದಂತೆ ಒತ್ತಾಯಿಸಿ ನಿರ್ಮಾಣ ಹಂತದ ಘಟಕದ ಬಳಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ ಪಿಡಿಒ ಸುರೇಶ ಛಲವಾದಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಬಳ್ಳಾರಿ ರಾಮಣ್ಣನಾಯಕ ಮಾತನಾಡಿ, ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ಘಟಕ ನಿರ್ಮಿಸಬಾರದು ಎಂಬ ಕಾಯ್ದೆಯಿದ್ದರೂ, ಜನರ ಅಭಿಪ್ರಾಯ ಪಡೆಯದೇ ಘಟಕ ನಿರ್ಮಾಣಕ್ಕೆ ಅವಕಾಶ ನೀಡಿದ್ದು ಸರಿಯಲ್ಲ. ಗ್ರಾಮದ ವಾರ್ಡ್ ನಂ.1 ಸ.ನಂ.48 ಜನವಸತಿ ಪ್ರದೇಶದಲ್ಲಿ ಜಿಎಂಜಿ ಅನಿಲ ಸಂಗ್ರಹ ಘಟಕದ ಕಾಮಗಾರಿ ನಡೆಯುತ್ತಿದ್ದು, ಸುತ್ತಲಿನ ಜನರು ಆಕ್ಷೇಪಿಸಿದರೂ ಕಾಮಗಾರಿ ನಿಂತಿಲ್ಲ.
ಘಟಕದ ಸಮೀಪ ಪೆಟ್ರೋಲ್ ಬಂಕ್ ಹಾಗೂ ತೋಟಗಾರಿಕೆ ಇಲಾಖೆ ಜಮೀನಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ತಂಗುದಾಣವಿದೆ. ಘಟಕದಲ್ಲಿ ಸೋರಿಕೆ ಅಥವಾ ಅಹಿತಕರ ಘಟನೆ ನಡೆದರೆ ಜನವಸತಿ ಮೇಲೆ ಪರಿಣಾಮ ಬೀರಲಿದ್ದು, ಅನಾಹುತ ಸಂಭವಿಸಲಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಿವಾಸಿಗಳಿಂದ ಅಭಿಪ್ರಾಯ ಸಂಗ್ರಹಿಸಬೇಕು. ಯಾವುದೇ ಕಾರಣಕ್ಕೂ ಘಟಕದ ನಿರ್ಮಾಣಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿದರು.
ಪ್ರಮುಖರಾದ ಟಿ.ರಘು, ವೆಂಕಟೇಶ್ವರಾವ್, ಜಿ.ರಾಜೇಶ, ಎನ್.ನಾಗೇಶ್ವರರಾವ್, ಎ.ಮುರುಳೀಕೃಷ್ಣ, ರಾಮಕೃಷ್ಣ, ಶ್ರೀನಿವಾಸ, ಎಸ್.ವೆಂಕಟೇಶ, ಸತೀಶ, ಎಸ್.ಮುರಳೀಕೃಷ್ಣ ಇತರರಿದ್ದರು.