ಗಂಗಾವತಿಯಲ್ಲಿ ಸಹಕಾರ ಭಾರತಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಜಿಲ್ಲಾ ಅಧಿವೇಶನವನ್ನು ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಮಂಗಳವಾರ ಉದ್ಘಾಟಿಸಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಜಿಲ್ಲಾಧ್ಯಕ್ಷ ರಮೇಶ ಕವಲೂರು ಇತರರಿದ್ದರು. 
ಕೊಪ್ಪಳ

ಸಹಕಾರಿ ಕ್ಷೇತ್ರ ಅಭಿವೃದ್ಧಿಗೆ ಪೂರಕ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಅಭಿಮತ
  • ಜಿಲ್ಲಾ ಅಧಿವೇಶನ ಉದ್ಘಾಟನೆ
ಗಂಗಾವತಿ: ಅಭಿವೃದ್ಧಿಗೆ ಪೂರಕವಾದ ಸಹಕಾರಿ ಕ್ಷೇತ್ರದಲ್ಲಿ ವೃತ್ತಿಪರತೆ ಮುಖ್ಯವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮೂಲಕ ಉತ್ತಮ ಸೇವೆ ನೀಡುವ ಅಗತ್ಯವಿದೆ ಎಂದು ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಹೇಳಿದರು.
ನಗರದ ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಸಹಕಾರ ಭಾರತಿ ಜಿಲ್ಲಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ವೃತ್ತಿಪರತೆಯ ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿಯಿದ್ದಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯ. ಸಹಕಾರಿ ಕ್ಷೇತ್ರದಲ್ಲಿ ಯುವ ಸಮುದಾಯ ಮುಂಚೂಣಿಯಲ್ಲಿರಬೇಕಿದ್ದು, ಅಭಿವೃದ್ಧಿ ಅಗತ್ಯತೆ ಅನುಗುಣ ಸೇವೆ ಸಲ್ಲಿಸುವ ಮನೋಭಾವ ರೂಢಿಸಿಕೊಳ್ಳಬೇಕಿದೆ. ಸಹಕಾರ ಭಾರತಿ ಹೋರಾಟದ ಲದಿಂದ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಆರಂಭಿಸಿದ್ದು, ಸಹಕಾರಿ ವಿಮೆಗೆ ಚಾಲನೆ ನೀಡಲು ಚಿಂತನೆ ನಡೆಸಿರುವುದು ಗಮನಾರ್ಹ ಬೆಳವಣಿಗೆ. ಕಾಲಕಾಲಕ್ಕೆ ಬದಲಾಗುವ ಸಹಕಾರಿ ಕಾಯ್ದೆ ಅನ್ವಯ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆಯಿದೆ ಎಂದರು.
ಸಹಕಾರ ಭಾರತಿ ಜಿಲ್ಲಾಧ್ಯಕ್ಷ ರಮೇಶ ಕವಲೂರು ಮಾತನಾಡಿ, ಸಹಕಾರಿ ಕ್ಷೇತ್ರಗಳಲ್ಲಿದ್ದ ಗೊಂದಲಗಳ ನಿವಾರಣೆಗೆ ಸಹಕಾರ ಭಾರತಿ ನೆರವಾಗಿದ್ದು, ತೆರಿಗೆ ಇತರ ನೋಟಿಸ್‌ಗಳ ವಿಚಾರದಲ್ಲೂ ಪರಿಹಾರ ನೀಡಿದೆ. ಸಹಕಾರಿ ಕ್ಷೇತ್ರದ ಬೆಳವಣಿಗೆ ಜತೆಗೆ ಗ್ರಾಮೀಣಾಭಿವೃದ್ಧಿ ಪೂರಕವಾದ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನಪ್ಪ ಮಳಗಿ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಸಹಕಾರ ಭಾರತಿ ಕೊಡುಗೆ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಉಪನ್ಯಾಸ ನೀಡಿದರು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಸಹಕಾರಿ ಭಾರತಿ ಕ್ರೆಡಿಟ್ ಸೆಲ್ ಪ್ರಮುಖ ಶರಣಪ್ಪ ಹ್ಯಾಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹಕ್ಕಿ, ಸಂ.ಕಾರ್ಯದರ್ಶಿ ಆನಂದ ಕೊಟ್ರಪ್ಪ ಅಕ್ಕಿ, ತಾಲೂಕಾಧ್ಯಕ್ಷ ಶರಬೇಂದ್ರ ಬೆನಕನಾಳ್, ಪ್ರಮುಖರಾದ ಶಂಕರಗೌಡ ಹೊಸಳ್ಳಿ, ಜಿ.ಶ್ರೀಧರ್, ಮಹಿಳಾ ಪ್ರಮುಖ ಲಲಿತಾ ನಾಗರಾಜ್ ಮ್ಯಾಗಳಮನಿ ಇತರರಿದ್ದರು.