ನ್ಯಾ. ಮಹಾಂತೇಶ ಎಸ್​. ದರಗದ  
ಕೊಪ್ಪಳ

ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ನ್ಯಾ. ಮಹಾಂತೇಶ ಎಸ್​. ದರಗದ ಸೂಚನೆ
  • ಜುಲೈ 11 ರಂದು ರಾಷ್ಟ್ರೀಯ ಲೋಕ್​ ಅದಾಲತ್​
ಕೊಪ್ಪಳ : ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ರಾಷ್ಟ್ರೀಯ ಲೋಕ್​ ಅದಾಲತ್​ ಹಾಗೂ ಸಮಾಧಾನ ಸಮಾರೋಹ ವಿಶೇಷ ಲೋಕ್​ ಅದಾಲತ್​ ಉತ್ತಮ ಅವಕಾಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಮಹಾಂತೇಶ ಎಸ್​. ದರಗದ ಹೇಳಿದರು.
ಜಿಲ್ಲಾ ನ್ಯಾಯಾಲಯದ ಡಿಎಲ್​ಎಸ್​ಎ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ. ಚಂದ್ರಶೇಖರ ನೇತೃತ್ವದಲ್ಲಿ ಜುಲೈ 11ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್​ ಅದಾಲತ್​ ನಡೆಯಲಿದ್ದು. ಸಿವಿಲ್​ ದಾವೆಗಳು, ಭೂಸ್ವಾಧಿನ, ಬ್ಯಾಂಕ್​ ವಸೂಲಾತಿ, ಚೆಕ್​ ಬೌನ್ಸ್​, ಮೋಟಾರು ಅಪಘಾತ ಪರಿಹಾರ, ವೈವಾಹಿಕ ಹಾಗೂ ರಾಜಿಯಾಗಲು ಅರ್ಹವಾದ ಕ್ರಿಮಿನಲ್​ ಪ್ರಕರಣಗಳನ್ನು ಪರಸ್ಪರ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಸಂಪೂರ್ಣ ಶುಲ್ಕವನ್ನು ವಾಪಸ್​ ನೀಡಲಾಗುವುದು. ಭಾರತದ ಸವೋರ್ಚ್ಚ ನ್ಯಾಯಾಲಯದಿಂದ ಆಗಸ್ಟ್​ 21, 22 ಹಾಗೂ 23ರಂದು ಮೂರು ದಿನಗಳ ಕಾಲ ಸಮಾಧಾನ ಸಮಾರೋಹ ವಿಶೇಷ ಲೋಕ್​ ಅದಾಲತ್​ ಆಯೋಜಿಸಲಾಗಿದ್ದು. ಕರ್ನಾಟಕಕ್ಕೆ ಸಂಬಂಧಿಸಿದಂತೆ 4328 ಪ್ರಕರಣಗಳನ್ನು ಸಂಧಾನಕ್ಕೆ ಗುರುತಿಸಲಾಗಿದೆ. ಜಿಲ್ಲೆಯಿಂದ 60 ಸಿವಿಲ್​- ಹಾಗೂ 1 ಕ್ರಿಮಿನಲ್​- ಪ್ರಕರಣ ಸೇರಿ ಒಟ್ಟು 61 ಪ್ರಕರಣಗಳನ್ನು ಇತ್ಯರ್ಥಕ್ಕೆ ಆಯ್ಕೆ ಮಾಡಲಾಗಿದೆ. ಸವೋರ್ಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಸಾರ್ವಜನಿಕರು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.