ಹಾಲುಮತ ಪೂಜಾರಿಗಳಿಗೆ ತರಬೇತಿ ಹಾಗೂ ಹಾಲುಮತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಯಲಬುರ್ಗಾದಲ್ಲಿ ಕನಕಗುರುಪೀಠ ಬಾದಿಮನಾಳ ಶಾಖಾಮಠದ ಶಿವಸಿದ್ದೇಶ್ವರ ಸ್ವಾಮೀಜಿ ಪೋಸ್ಟರ್ ಬಿಡುಗಡೆ ಮಾಡಿದರು. ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪಾಟೀಲ, ಹಿರಿಯ ಮುಖಂಡ ರೇವಣೆಪ್ಪ ಹಿರೇಕುರುಬರ, ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲಚಂದ್ರ ಸಾಲಬಾವಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವು ರಾಜೂರು ಇತರರಿದ್ದರು.
- ಶಿವಸಿದ್ದೇಶ್ವರ ಸ್ವಾಮೀಜಿ ಮಾಹಿತಿ
- ಯಲಬುರ್ಗಾದಲ್ಲಿ ಪೋಸ್ಟರ್ ಬಿಡುಗಡೆ
ಯಲಬುರ್ಗಾ: ಹಾಲುಮತ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಸಮುದಾಯವರ ಮೇಲಿದೆ ಎಂದು ಕನಕಗುರುಪೀಠ ಬಾದಿಮನಾಳ ಶಾಖಾಮಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಹಾಲುಮತ ಪೂಜಾರಿಗಳಿಗೆ ತರಬೇತಿ ಹಾಗೂ ಹಾಲುಮತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್‌ನಲ್ಲಿ ಜ.12, 13 ಮತ್ತು 14 ರಂದು ಹಾಲುಮತ ಪೂಜಾರಿಗಳಿಗೆ ತರಬೇತಿ ಹಾಗೂ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹೀಗಾಗಿ ತಾಲೂಕಿನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಬೀರದೇವರು, ರೇವಣಸಿದ್ದೇಶ್ವರ, ಮೈಲಾರಲಿಂಗೇಶ್ವರ, ಮಾಳಿಂಗರಾಯ, ಅಮೋಘಸಿದ್ದೇಶ್ವರ ದೇವಸ್ಥಾನದ ಪೂಜಾರಿಗಳಿಗೆ ಯಾವುದೇ ಪೂಜಾ ಪದ್ಧತಿ ಗೊತ್ತಿಲ್ಲದ ಕಾರಣ ಭಕ್ತರು ದೇವಸ್ಥಾನಗಳ ಒಡನಾಟ ಬಿಡುತ್ತಿದ್ದಾರೆ. ಹೀಗಾಗಿ ಪೂಜಾರಿಗಳಿಗೆ ಪೂಜಾಪದ್ಧ್ದತಿ ಮತ್ತು ಮಂತ್ರಗಳನ್ನು ಕಲಿಸುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹಾಲುಮತ ಪೂಜಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮೂರು ದಿನಗಳ ಕಾಲ ನಡೆವ ಸಾಹಿತ್ಯ ಸಮಾರಂಭದಲ್ಲಿ ಹಲವು ಪೂಜ್ಯರು, ಸಂಶೋಧಕರು, ಉಪನ್ಯಾಸಕರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಹಾಲುಮತ ಸಮಾಜದ ತಾಲೂಕಾಧ್ಯಕ್ಷ ವೀರನಗೌಡ ಪಾಟೀಲ, ಹಿರಿಯ ಮುಖಂಡ ರೇವಣೆಪ್ಪ ಹಿರೇಕುರುಬರ, ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲಚಂದ್ರ ಸಾಲಬಾವಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವು ರಾಜೂರು, ಪ್ರಮುಖರಾದ ಯಲ್ಲಪ್ಪ ಮುಧೋಳ, ಅಮರೇಶ ಕುರುಬರ, ಮುದಿಯಪ್ಪ ಹಿರೇಅರಳಿಹಳ್ಳಿ, ಮುತ್ತಣ್ಣ ಪುರ್ತಗೇರಿ, ಕಲ್ಲಪ್ಪ ಕರೇಗೌಡ್ರ, ಮುತ್ತಣ್ಣ ಪುರ್ತಗೇರಿ ಇತರರಿದ್ದರು.