ಕುಷ್ಟಗಿಯ ಮದ್ದಾನೇಶ್ವರ ಮಠದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕರಿಬಸವ ಶಿವಾಚಾರ್ಯರ ಮಾತನಾಡಿದರು. ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ದೇವರು, ಮಾಜಿ ಶಾಸಕ ಕೆ.ಶರಣಪ್ಪ ಇತರರಿದ್ದರು.
- ನಿಡಶೇಸಿ ಮಠದ ಅಭಿನವ ಶ್ರೀ ಕರಿಬಸವ ಶಿವಾಚಾರ್ಯರು ಮನವಿ
- ಕುಷ್ಟಗಿ ಮದ್ದಾನೇಶ್ವರ ಮಠದಲ್ಲಿ ಪೂರ್ವಭಾವಿ ಸಭೆ
ಕುಷ್ಟಗಿ: ಭವ್ಯ ಪರಂಪರೆ ಹೊಂದಿದ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯರ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಹಿನ್ನೆಲೆಯಲ್ಲಿ ನೂತನ ಶಿಲಾಮಂಟಪದ ಉದ್ಘಾಟನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಠದ ಭಕ್ತರು ಸಹಕಾರ ನೀಡಬೇಕು ಎಂದು ನಿಡಶೇಸಿ ಮಠದ ಅಭಿನವ ಕರಿಬಸವ ಶಿವಾಚಾರ್ಯರು ಹೇಳಿದರು.
ಮದ್ದಾನೇಶ್ವರ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಿಲಾಮಂಟಪದ ಲೋಕಾರ್ಪಣೆ 2027ರ ಮಾರ್ಚ್‌ನಲ್ಲಿ ಆಗಲಿದೆ ಎಂದು ತಿಳಿಸಿದರು.
ಕರಿಬಸವ ಶಿವಾಚಾರ್ಯರು ಮಾತನಾಡಿ, ಯಾವ ಭಕ್ತರಿಂದಲೂ ದೇಣಿಗೆ ಪಡೆಯದೆ ಜೋಳಿಗೆಗೆ ಹಾಕಿದ ಒಂದು ಕೋಟಿ ರೂ.ನಲ್ಲಿ ಬೃಹತ್ ಶಿಲಾಮಂಟಪ ನಿರ್ಮಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭದ ನಿಮಿತ್ತ ಕನ್ನೇರಿ ಹಾಗೂ ಸೂತ್ತೂರು ಶ್ರೀಗಳನ್ನು ಆಹ್ವಾನಿಸಲಾಗುವುದು. ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ, 21 ದಿನಗಳ ಕಾಲ ಪುರಾಣ, 25 ಸಾವಿರ ಮುತ್ತೈದೆಯರಿಗೆ ಉಡಿ ತುಂಬುವುದು, 25 ಜನ ಪೂಜ್ಯರಿಂದ ಶಿಲಾಮಂಟಪದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮಹಾಪೂಜೆ, ಹೋಮ-ಹವನ ಸೇರಿದಂತೆ 25 ಸಾವಿರ ಕುಂಭ ಮೆರವಣಿಗೆ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಾಧನೆಗೈದ ಮಠದ ಭಕ್ತರಿಗೆ, ದಾನಿಗಳಿಗೆ ಗೌರವಾರ್ಪಣೆ ಹಾಗೂ ನಿರಂತರ ಪ್ರಸಾದ ವ್ಯವಸ್ಥೆಗೆ ಸುಮಾರು ಮೂರು ಕೋಟಿ ರೂ. ಅಗತ್ಯವಿದೆ. ಕಾರಣ ಭಕ್ತರು ಸೇವೆ ಸಲ್ಲಿಸಿ ಯಶಸ್ಸುಗೊಳಿಸಲು ಕರೆ ನೀಡಿದರು.
ಬಳ್ಳಾರಿ ವಿಭಾಗದ ಕಾನೂನು ಹಿರಿಯ ಅಧಿಕಾರಿ ಬಿ.ಎಸ್ ಪಾಟೀಲ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದ ಜತೆಗೆ ಆರೋಗ್ಯ ತಪಾಸಣೆ, ರೈತಪರ ಚಿಂತನೆಯ ಕುರಿತು ವಿಚಾರ ಗೋಷ್ಠಿ ಮಾಡಲು ಸಲಹೆ ನೀಡಿದರು.ಶ್ರೀ ಚಂದ್ರಶೇಖರ ದೇವರು ದೋಟಿಹಾಳ, ತಾವರಗೇರಾ ಮತ್ತು ಗುಡದೂರಿನ ಶ್ರೀಗಳು, ಭಕ್ತರಾದ ರವಿಕುಮಾರ್ ಹಿರೇಮಠ, ವೀರೇಶ ಬಂಗಾರಶೆಟ್ಟರ್, ಶೇಖರಗೌಡ ಮಾ.ಪಾ, ಬಸವರಾಜ ಹಳ್ಳೂರು, ದೇವೇಂದ್ರಪ್ಪ ಬಳೂಟಗಿ, ಬಸವರಾಜ ಕುದರಿಮೋತಿ, ಶಶಿಧರ ಕವಲಿ, ಟಿ.ಬಸವರಾಜ, ಮರಸಣ್ಣ ತಾಳದ, ಕಂದಕೂರಪ್ಪ ವಾಲ್ಮೀಕಿ, ಸಿ.ಎಂ.ಹಿರೇಮಠ, ಶಿವಕುಮಾರ್ ಗಂಧದಮಠ, ಉಮೇಶ್ ಮಂಗಳೂರು ಇದ್ದರು.
ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವ ಮಾಡಲು ಕುಷ್ಟಗಿ ಪಟ್ಟಣದ ರಸ್ತೆಗಳು ಸಮರ್ಪಕವಾಗಿಲ್ಲ. ಹೀಗಾಗಿ ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಮರು ಪರಿಶೀಲಿಸಬೇಕು. ವೀರಶೈವ ಲಿಂಗಾಯತರಿಗೆ ಲಿಂಗಪೂಜೆ ಮತ್ತು ಲಿಂಗ ದೀಕ್ಷೆಯ ಅರಿವು ಮೂಡಿಸಿದರೆ ಸಾರ್ಥಕ.
— > ಕೆ.ಶರಣಪ್ಪ, ಮಾಜಿ ಶಾಸಕ, ಕುಷ್ಟಗಿ