ಕೊಪ್ಪಳ ನಗರದಾದ್ಯಂತ ಡೆಂಘೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಜಾಗೃತಿ ಜಾಥ ಮಾಡಿಲಾಯಿತು.
- ಡಾ. ಟಿ.ಲಿಂಗರಾಜು
- ಡೆಂಘೆ ಜಾಗೃತಿ ಜಾಥ
ಕೊಪ್ಪಳ : ಡೆಂಘೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಉಚಿತ ಪ್ರಯೋಗಾಲಯ ಪರೀಕ್ಷೆಗಳ ಮಾಡಲಾಗುತ್ತಿದ್ದು, ಜನರು ಅನಗತ್ಯ ಭಯಕ್ಕೆ ಒಳಗಾಗದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಹೇಳಿದರು.
ರಾಷ್ಟ್ರೀಯ ಡೆಂಘೆ ದಿನಾಚರಣೆ -2026ರ ಅಂಗವಾಗಿ ಡೆಂಘೆ ಜ್ವರದ ಹರಡುವಿಕೆ, ನಿಯಂತ್ರಣ ಹಾಗೂ ರೋಗ ತಡೆಗಟ್ಟಲು ಇತ್ತೀಚೆಗೆ ನಗರದ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಡೆಂಘೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಡೆಂಘೆ, ಚಿಕೂನ್ಗುನ್ಯಾ ಜ್ವರಗಳಿಗೆ ಯಾವುದೇ ರ್ನಿಧಿಷ್ಟ ಚಿಕಿತ್ಸೆ ಅಥವಾ ಲಸಿಕೆಯಾಗಲಿ ಪ್ರಸ್ತುತ ಲಭ್ಯವಿಲ್ಲದಿದ್ದರೂ ಸಹ ಜನರೂ ಭಯಪಡುವ ಅವಶ್ಯಕತೆ ಇಲ್ಲ. ಡೆಂ, ಚಿಕೂನ್ಗುನ್ಯಾ ಜ್ವರಗಳ ಲಕ್ಷಣಗಳನ್ನಾಧರಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಯಾವುದೇ ಜ್ವರ ಕಾಣಿಸಿಕೊಂಡರೇ ಜನಸಮುದಾಯ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ವಿ.ಬಿ.ಡಿ ನಿಯಂತ್ರಣಾಧಿಕಾರಿ ಡಾ. ಕುಮಾರಸ್ವಾಮಿ ಗೋನಾಳ್ ಮಾತನಾಡಿ, ಪ್ರಸ್ತುತ ಪೂರ್ವ ಮುಂಗಾರು ಮಳೆಗಾಲ ಆರಂಭವಾಗಿರುವುದರಿಂದ ವಿವಿಧೆಡೆ ನೀರು ನಿಂತಿರುವ ತಾಣಗಳು ಹಾಗೂ ನೀರಿನ ಶೇಖರಣಾ ಪಾತ್ರೆಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದರಿಂದ ಡೆಂಘೆ, ಚಿಕೂನ್ಗುನ್ಯಾ ಮತ್ತು ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ. ವಿಶೇಷವಾಗಿ ಡೆಂ ಹಾಗೂ ಚಿಕೂನ್ಗುನ್ಯಾ ಹರಡುವ ಈಡಿಸ್ ಸೊಳ್ಳೆಗಳು ಮನೆ ಒಳಭಾಗದಲ್ಲೇ ಕಚ್ಚುವುದರಿಂದ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚಿದೆ. ಯಾವುದೇ ರೀತಿಯ ಜ್ವರ ಕಂಡುಬಂದರೂ ತಕ್ಷಣ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಉಚಿತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಅರಿವು
ನಗರದ ಆಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರು ಹಾಗೂ ಸಿಬ್ಬಂದಿಗೆ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸಲಾಯಿತು. ನಗರದಾದ್ಯಂತ ಸಂಚರಿಸಿದ ಡೆಂಘೆ ಜಾಗೃತಿ ಜಾಥಾ ಮೂಲಕ ಸಂದೇಶ ಹಾಗೂ ಜಾನಪದ ಗೀತೆಗಳನ್ನು ಬಿತ್ತರಿಸಲಾಯಿತು.ಡೆಂಘೆ ಜಾಗೃತಿ ಗೀತೆಗಳನ್ನು ಹಾಡುವುದರ ಜತೆಗೆ ಕರಪತ್ರ ಹಂಚಿಕೆ ಹಾಗೂ ಬಿತ್ತಿಪತ್ರ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಚ್.ನಂದಕುಮಾರ್, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಪ್ರಕಾಶ್ ಎಚ್.ಎಸ್., ಡಾ. ರಾಮಾಂಜನೇಯ್ಯ, ಶಿವಾನಂದ ಪೂಜಾರ ಇತರರಿದ್ದರು.