ಕೊಪ್ಪಳ ವಿವಿಯು ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಎಬಿವಿಪಿ ಕೊಪ್ಪಳ ನಗರ ಟಕದಿಂದ ಕೊಪ್ಪಳ ವಿವಿ ಮೌಲ್ಯಮಾಪನ ಕುಲಸಚಿವ ರಮೇಶಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುಮಂಗಲ, ಜಿಲ್ಲಾ ಸಂಚಾಲಕ ಹಮ್ಮಿಗೇಶ ಎಸ್​.ಪಿ., ನಗರ ಕಾರ್ಯದರ್ಶಿ ಆದಿತ್ಯ ಎನ್​. ಹವಳೆ ಇದ್ದರು. 
ಕೊಪ್ಪಳ

ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡದಂತೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಎಬಿವಿಪಿಯಿಂದ ಮನವಿ

ಕೊಪ್ಪಳ : ಕೊಪ್ಪಳ ವಿವಿ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳ ಮೂರನೇ ಹಾಗೂ ಐದನೇ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ವಿಧಿಸಿರುವ ಪ್ರವೇಶಾತಿ ಶುಲ್ಕ ಹೆಚ್ಚಳವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಕೊಪ್ಪಳ ನಗರ ಘಟಕ ತೀವ್ರವಾಗಿ ಖಂಡಿಸಿ ಸೋಮವಾರ ಕೊಪ್ಪಳ ವಿವಿ ಮೌಲ್ಯಮಾಪನ ಕುಲಸಚಿವ ರಮೇಶಗೆ ಮನವಿ ಸಲ್ಲಿಸಲಾಯಿತು.

ಯಾವುದೇ ಪೂರ್ವ ಸೂಚನೆ ಅಥವಾ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದೆ ಏಕಾಏಕಿ ಶುಲ್ಕ ಹೆಚ್ಚಿಸಿರುವುದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಮಧ್ಯಮ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಂಕಷ್ಟ ಎದುರಿಸುತ್ತಿದ್ದು, ಶುಲ್ಕ ಹೆಚ್ಚಳವು ಅವರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿದೆ. ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದ್ದು, ಅದನ್ನು ದುಬಾರಿಗೊಳಿಸುವ ಯಾವುದೇ ಕ್ರಮವನ್ನು ಎಬಿವಿಪಿ ಸಹಿಸುವುದಿಲ್ಲ ಎಂದು ಹೇಳಿದರು.
ಹೆಚ್ಚಿಸಿರುವ ಪ್ರವೇಶಾತಿ ಶುಲ್ಕವನ್ನು ಕೂಡಲೇ ಹಿಂಪಡೆದು, ಹಿಂದಿನ ಶುಲ್ಕವನ್ನೇ ಮುಂದುವರಿಸಬೇಕು. ಬೇಡಿಕೆ ಈಡೇರಿಸದಿದ್ದರೆ ವಿದ್ಯಾರ್ಥಿಗಳನ್ನು ಸಂಘಟಿಸಿ ವಿಶ್ವವಿದ್ಯಾಲಯದ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುಮಂಗಲ, ಜಿಲ್ಲಾ ಸಂಚಾಲಕ ಹಮ್ಮಿಗೇಶ ಎಸ್​.ಪಿ., ನಗರ ಕಾರ್ಯದರ್ಶಿ ಆದಿತ್ಯ ಎನ್​. ಹವಳೆ, ತಾಲೂಕು ಸಂಚಾಲಕ ಮನೋಹರ್​ ಇತರರಿದ್ದರು.