ಕೇಂದ್ರ ಸಚಿವ ವಿ.ಸೋಮಣ್ಣ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಒತ್ತಾಯಿಸಿದರು.
ಕೊಪ್ಪಳ: ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮೇಲೆ ಹಲ್ಲೆಗೆ ಮುಂದಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ನಿಯೋಗವು ಎಸ್ಪಿ ಡಾ.ರಾಮ್.ಎಲ್.ಅರಸಿದ್ದಿ ಅವರಿಗೆ ಒತ್ತಾಯಿಸಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಮಾತನಾಡಿ, ತಾಲೂಕಿನ ಹಿಟ್ನಾಳ್ ಗ್ರಾಮದ ರೈಲ್ವೆ ಸೇತುವೆ ಕಾಮಗಾರಿ ಭೂಮಿಪೂಜೆಗೆ ಎರಡು ದಿನಗಳ ಹಿಂದ ರೈಲ್ವೆ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ ಬಂದಾಗ ಅನಗತ್ಯ ವಿವಾದ ಮಾಡಲಾಗಿದೆ. ಶಿಷ್ಟಾಚಾರ ಉಲ್ಲಂಘನೆ ಆಗದಿದ್ದರೂ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ, ಹಲ್ಲೆಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮುಂದಾಗಿದ್ದು ಸರಿಯಲ್ಲ. ಸಂಸದ- ಶಾಸಕರ ತವರೂರಿನಲ್ಲಿಯೇ ಹೀಗಾಗಿರುವುದು ದುರಂತ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಈ ಪ್ರಕರಣದಲ್ಲಿ ತ್ವರಿತವಾಗಿ ಸೊಮೋಟೋ ಪ್ರಕರಣ ದಾಖಲು ಮಾಡಿಕೊಂಡು ದುಷತ್ಯಕ್ಕೆ ಕಾರಣ ಆದವರ ಮೇಲೆ ಕ್ರಮ ಜರುಗಿಸಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ಭೂಮಿ ಪೂಜೆಗೆ ಬಂದಾಗ ಕಾಂಗ್ರೆಸ್ ನಾಯಕರು ಉದ್ದೇಶ ಪೂರ್ವಕವಾಗಿ ಹಲ್ಲೆಗೆ ಮುಂದಾಗಿದ್ದು ಸರಿಯಲ್ಲ. ಜಿಲ್ಲೆಯ ಕಾಂಗ್ರೆಸ್ಸಿಗರಿಗೆ ಅಭಿವೃದ್ಧಿ ಬೇಕಿಲ್ಲ. ಹೀಗಾಗಿ ಇಂತಹ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸ್ಗೂರು ಮಾತನಾಡಿ, ಈ ಘಟನೆಯ ಹಿಂದೆ ಷಡ್ಯಂತ್ರವಿದೆ. ಕೇಂದ್ರ ಸಚಿವರು ಜಿಲ್ಲೆಗೆ ಬಂದಾಗ ರಕ್ಷಣೆ ಸಿಗದಿದ್ದರೇ ಹೇಗೆ ? ಈ ವಿಚಾರದಲ್ಲಿ ಪೊಲೀಸ್ ಇಲಾಖೆ, ಸರಿಯಾದ ನ್ಯಾಯ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಅಪ್ಪಣ್ಣ ಪದಕಿ, ಎಸ್.ಆರ್. ಭೂಸನೂರಮಠ, ಪೀರಾ ಹುಸೇನ ಹೊಸಳ್ಳಿ, ರಾಘವೇಂದ್ರ ಪಾನಗಂಟಿ, ಈಶಪ್ಪ ಮಾದಿನೂರ, ರಾಜು ಬಾಕಳೆ, ಸುನಿಲ ಹೆಸರೂರ, ಉಮೇಶ, ರಮೇಶ ನಾಡಗೇರಾ, ರಾಜು ವಸ್ತ್ರದ. ಸೇರಿದಂತೆ ಇತರರು ಇದ್ದರು.