ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಐಡಿಎಸ್​ಓ ವಿದ್ಯಾರ್ಥಿಗಳು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಎಐಡಿಎಸ್​ಒ ರಾಜ್ಯ ಮುಖಂಡ ತುಳಜರಾಮ್​ ಎನ್​.ಕೆ., ಜಿಲ್ಲಾ ಸಂಘಟನಾಕಾರ ಪ್ರದಿಪ್​, ಶಾರದ, ಪೋಷಕರಾದ ಸಿದ್ದಲಿಂಗರೆಡ್ಡಿ, ಶರಣು ಗಡ್ಡಿ ಇದ್ದರು. 
ಕೊಪ್ಪಳ

ಎನ್​ಟಿಎ ರದ್ದುಗೊಳಿಸಲು ಆಗ್ರಹ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಎಐಡಿಎಸ್​ಓ ಪ್ರತಿಭಟನೆ
ಕೊಪ್ಪಳ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಐಡಿಎಸ್​ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನೀಟ್​ ಪ್ರಶ್ನೆ ಪತ್ರಿಕೆ ಪದೇ ಪದೆ ಸೋರಿಕೆ ಆಗುತ್ತಿದೆ. ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯ ಮತ್ತು ಕನಸುಗಳಿಗೆ ದೊಡ್ಡ ಹೊಡೆತ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಮರುಕಳಿಸುತ್ತಿರುವ ಇಂತಹ ಘಟನೆಗಳು ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಂದಿಸುತ್ತಿವೆ ಎಂದು ಹೇಳಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕೋಚಿಂಗ್​ ಮಾಫಿಯಾದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಹಣವಿರುವವರಿಗೆ ಮಾತ್ರ ಅವಕಾಶ ಕಲ್ಪಿಸುವ ವ್ಯವಸ್ಥೆಯಾಗಿ ಪರಿಣಮಿಸಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಲಾಭದಾಯಕ ಮಾರುಕಟ್ಟೆಯನ್ನಾಗಿ ಮಾಡಿರುವ ಪರಿಣಾಮ ವಿದ್ಯಾರ್ಥಿಗಳಲ್ಲಿ ಆತಂಕ, ನಿರಾಶೆ ಮತ್ತು ಹತಾಶೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಾರದರ್ಶಕ ಮತ್ತು ಸುರಕ್ಷಿತ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಪ್ರವೇಶ ಪರೀಕ್ಷಾ ಪದ್ಧತಿಯನ್ನು ಸಾಮಾನ್ಯ ವಿದ್ಯಾರ್ಥಿಗಳಿಗೂ ಸುಲಭವಾಗಿ ಲಭ್ಯವಾಗುವಂತೆ, ಖಾಸಗಿ ವಾಣಿಜ್ಯ ಹಿತಾಸಕ್ತಿಗಳಿಂದ ಮುಕ್ತವಾಗುವಂತೆ ಪುನರ್​ರಚನೆ ಮಾಡಬೇಕೆಂದು ಆಗ್ರಹಿಸಿದರು.
ಎಐಡಿಎಸ್​ಒ ರಾಜ್ಯ ಮುಖಂಡ ತುಳಜರಾಮ್​ ಎನ್​.ಕೆ., ಜಿಲ್ಲಾ ಸಂಘಟನಾಕಾರ ಪ್ರದಿಪ್​, ಶಾರದ, ಪೋಷಕರಾದ ಸಿದ್ದಲಿಂಗರೆಡ್ಡಿ, ಶರಣು ಗಡ್ಡಿ ಹಾಗೂ ವಿದ್ಯಾರ್ಥಿಗಳಾದ ಅಭಿಷೇಕ್​, ಪಲ್ಲವಿ, ಪ್ರತಿಭಾ, ಸ್ಫೂರ್ತಿ, ಸ್ನೇಹ ಇತರರಿದ್ದರು.