ಕೊಪ್ಪಳ : ರೈತರಿಗೆ ರಸಗೊಬ್ಬರ ವಿತರಣೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಎಫ್ಐಡಿ ಲಿಂಕ್ ಕೇಳಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಸುಕಮುನಿಯಪ್ಪ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಲವಾರು ರೈತರು ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ಹಾಗೂ ದಾಖಲೆಗಳ ತೊಂದರೆಯಿಂದ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗುತ್ತಿದ್ದು, ಬಿತ್ತನೆ ಹಾಗೂ ಬೆಳೆ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಸಿಗದಿದ್ದರೆ ಬೆಳೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂದರು.
ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುವ ರೈತರ ಬಳಿ ಎ್ಐಡಿ ಇರದು. ಜಮೀನು ಮಾಲೀಕರು ನೀಡುವುದಿಲ್ಲ. ಎಫ್ಐಡಿ ಇದ್ದರೆ ಮಾತ್ರವೇ ನೀಡುವುದಾಗಿ ಹೇಳಿದರೆ ನಾವೇನು ಮಾಡಬೇಕು ? ಹೀಗಾಗಿ ಯಾವುದೇ ಲಿಂಕ್ ಅಥವಾ ತಾಂತ್ರಿಕ ನೆಪ ಹೇಳದೇ ರೈತರಿಗೆ ತಕ್ಷಣ ರಸಗೊಬ್ಬರ ವಿತರಣೆ ಮಾಡಬೇಕು. ರೈತರಿಗೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಬೇಕೇ ಹೊರತು ಅನಗತ್ಯ ಕಿರಿಕಿರಿ ನೀಡದೆ. ಸರ್ಕಾರ ಮತ್ತು ಕೃಷಿ ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಿ ಸರಳ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂದ ಪದಾಧಿಕಾರಿಗಳಾದ ಬಸಪ್ಪ ಗುಡಿ, ರುದ್ರಪ್ಪ ಮುಲಿಮನಿ, ಮುತ್ತಣ್ಣ ಬಡಿಗೇರ, ಅಣ್ಣಪ್ಪ ಜೋಗಿ ಇದ್ದರು.