- ಸಿಇ ಕಚೇರಿ ಮುತ್ತಿಗೆಗೆ ಬಿಜೆಪಿ ನಾಯಕರ ಯತ್ನ
ಕೊಪ್ಪಳ: ತಾಲೂಕಿನ ಮುನಿರಾಬಾದ್ ಟಿಬಿ ಡ್ಯಾಂನಿಂದ ವಿಜಯನಗರ ಎಡದಂಡೆ ಕಾಲುವೆಗಳಿಗೆ ನೀರು ಬಿಡಗಡೆಗೆ ಆಗ್ರಹಿಸಿ ಬಿಜೆಪಿ ನಾಯಕರು ಶುಕ್ರವಾರ ಸಿಇಕಚೇರಿಗೆ ಮುತ್ತಿಗೆ ಹಾಕಿದರು.
ಅಂಜನಾದ್ರಿಯಿಂದ ಮುನಿರಾಬಾದ್ ವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಕಾರರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು. ನೀರಾವರಿ ಅಧಿಕಾರಿಗಳು ನೀರು ಬಿಡಲು ಒಪ್ಪಿಗೆ ನೀಡದ್ದಕ್ಕೆ ಕೆರಳಿದ ಹೋರಾಟಗಾರರು ಮುಖ್ಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ ಜನಾರ್ದನರೆಡ್ಡಿ, ವಿಪ ಸದಸ್ಯರಾದ ಎನ್.ರವಿಕುಮಾರ್, ಹೇಮಲತಾ ನಾಯಕ ಇತರ ಜನಪ್ರತಿನಿಧಿಗಳು, ಕಾರ್ಯಕರ್ತರು ಒಮ್ಮಲೇ ನುಗ್ಗಿದರು. ಮುತ್ತಿಗೆ ಸೂಚನೆ ಮೊದಲೇ ಅರಿತಿದ್ದ ಪೊಲೀಸರು ಗೇಟ್ ಬೀಗ ಹಾಕಿ ಭದ್ರಪಡಿಸಿದ್ದರು. ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಪ್ರತಿಭಟನಕಾರರನ್ನು ವಶಕ್ಕೆ ಪಡೆದು ವಾಹನ ಹತ್ತಿಸಿದರು.
ಸ್ವಲ್ಪ ದೂರ ಹೋಗುತ್ತಲೇ ಮಹಿಳೆಯರು ಪೊಲೀಸ್ ವಾಹನ ಅಡ್ಡಗಟ್ಟಿದರು. ವಾಹನ ಮುಂದೆ ಬಿಡುವುದಿಲ್ಲವೆಂದು ಪಟ್ಟು ಹಿಡಿದರು ಮಹಿಳಾ ಪೊಲೀಸರು ಅವರನ್ನು ಎತ್ತಿ ಕರೆದೊಯ್ದರು. ಈ ವೇಳೆ ಗಂಗಾವತಿ ಬಿಜೆಪಿ ಕಾರ್ಯಕರ್ತೆ ರಾಜೇಶ್ವರಿ ಪ್ರಜ್ಞೆತಪ್ಪಿ ಬಿದ್ದರು. ಬಳಿಕ ಸಾವರಿಸಿ ಆ್ಯಂಬುಲೆನ್ಸ್ ನಲ್ಲಿ ಹಾಕಿ ಕಳಿಸಲಾಯಿತು.