ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಬ್ರಾಹ್ಮಣ ಅಭ್ಯರ್ಥಿಗಳಿಗೆ ಜನಿವಾರ ತೆಗಿಸಿದ್ದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು. ಗುರುರಾಜ ಎನ್​. ಜೋಶಿ, ಎಚ್​.ಬಿ. ದೇಶಪಾಂಡೆ, ವೇಣುಗೋಪಾಲ ಜಹಗೀರದಾರ, ಶ್ರೀನಿವಾಸ ಜೋಶಿ, ರವಿಕುಮಾರ್​ ಕುಲಕರ್ಣಿ ಇದ್ದರು.  
ಕೊಪ್ಪಳ

ಜನಿವಾರ ಕತ್ತರಿಸಿದ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಮನವಿ ಸಲ್ಲಿಕೆ
ಕೊಪ್ಪಳ : ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ, ಕತ್ತರಿಸಿದ ಘಟನೆ ಖಂಡಿಸಿ ತಪ್ಪಿತಸ್ಥ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕವು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಚಿಕ್ಕಬಳ್ಳಾಪುರದ ನಾಗಾರ್ಜುನ ಪಿಯು ಕಾಲೇಜು ಹಾಗೂ ಬೆಂಗಳೂರಿನ ಕೋರಮಂಗಲದ ಕೃಪಾನಿಧಿ ಕಾಲೇಜಿನಲ್ಲಿ ಪರೀಕ್ಷಾ ಪರಿಶೀಲನೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗಿದೆ. ಯಜ್ಞೋಪವೀತವು ಧಾರ್ಮಿಕ ನಂಬಿಕೆಯ ಸಂಕೇತವಾಗಿದ್ದು, ಅದನ್ನು ಕತ್ತರಿಸಿರುವುದು ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಭದ್ರತಾ ನಿಯಮಗಳ ಹೆಸರಿನಲ್ಲಿ ಧಾರ್ಮಿಕ ಆಚರಣೆಗಳನ್ನು ಹತ್ತಿಕ್ಕುವುದು ಸರಿಯಲ್ಲ. ಈ ಘಟನೆ ವಿದ್ಯಾರ್ಥಿಗಳ ಮನೋಭಾವದ ಮೇಲೆ ದುಫ್ಪಿರಿಣಾಮ ಬೀರುವುದಲ್ಲದೆ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಂದಿಸುತ್ತದೆ. ಈ ಘಟನೆಗೆ ಕಾರಣವಾದ ಎರಡೂ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಿ, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು ಎಂದು ಒತ್ತಾಯಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಚುನಾಯಿತ ಪ್ರತಿನಿಧಿ ಗುರುರಾಜ ಎನ್​. ಜೋಶಿ, ಎಚ್​.ಬಿ. ದೇಶಪಾಂಡೆ, ವೇಣುಗೋಪಾಲ ಜಹಗೀರದಾರ, ಶ್ರೀನಿವಾಸ ಜೋಶಿ, ರವಿಕುಮಾರ್​ ಕುಲಕರ್ಣಿ, ಅರವಿಂದ ದಿಗ್ಗಾವಿ, ಜಗನ್ನಾಥ ಹುನಗುಂದ ಇತರರಿದ್ದರು.