ಹನುಮಸಾಗರದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಗುರುವಾರ ಮಹಾತಪಸ್ವಿ ಶ್ರೀ ಅನ್ನದಾನೇಶ್ವರ ಶಿಲಾಮಂಟಪ ಲೋಕಾರ್ಪಣೆ ಹಾಗೂ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ, ಒಣಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಶಾಸಕ ದೊಡ್ಡನಗೌಡ ಎಚ್. ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಇತರರಿದ್ದರು. 
ಕೊಪ್ಪಳ

ಗುರುಪರಂಪರೆ ಆದರ್ಶಗಳು ಪಾಲನೆಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಹೇಳಿಕೆ
  • ಶ್ರೀ ಅನ್ನದಾನೇಶ್ವರ ಶಿಲಾಮಂಟಪ ಲೋಕಾರ್ಪಣೆ
ಹನುಮಸಾಗರ: ಶ್ರೀ ಅನ್ನದಾನೇಶ್ವರ ಮಠವು ಸಮಾಜ ಸೇವೆ, ಶಿಕ್ಷಣ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರ ಆಶಾಕಿರಣವಾಗಿ ಬೆಳೆಯುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತಪಸ್ವಿ ಶ್ರೀ ಅನ್ನದಾನೇಶ್ವರ ಶಿಲಾಮಂಟಪ ಲೋಕಾರ್ಪಣೆ ಹಾಗೂ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅನ್ನದಾನೇಶ್ವರ ಮಠ ಒಂದು ಸರ್ವ ಸಮುದಾಯಕ್ಕೆ ಸೇರಿದ್ದು. ಶ್ರೀಮಠವು ಗುರುಪರಂಪರೆಯ ಆದರ್ಶಗಳನ್ನು ಪಾಲಿಸಿಕೊಂಡು ಸಮಾಜಮುಖಿಯಾಗಿ ಸೇವೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉಚಿತ ಪ್ರಸಾದ ನಿಲಯ ಆರಂಭಿಸುವುದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಲ್ಪಿಸುವ ಕೆಲಸವಾಗಬೇಕು. ಯುವಜನತೆ ಯಾವುದೇ ವ್ಯಸನಗಳಿಗೆ ಒಳಗಾಗದೆ ಶಿಕ್ಷಣದ ಮೂಲಕ ಜೀವನ ರೂಪಿಸಿಕೊಳ್ಳಬೇಕು. ದಾನಿಗಳು ನೀಡುವ ನೆರವು ಸಮಾಜದ ಅಭಿವೃದ್ಧಿಗೆ ಸದ್ಬಳಕೆಯಾಗಬೇಕು. ಹಿಂದಿನ ಪೂಜ್ಯರ ತ್ರಿವಿಧ ದಾಸೋಹದ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಂಸ್ಥೆಯಲ್ಲಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಕೇವಲ ಪ್ರಮಾಣಪತ್ರಕ್ಕಾಗಿ ಶಿಕ್ಷಣ ಪಡೆಯುವುದಕ್ಕಿಂತ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಶಿಕ್ಷಣ ಅತ್ಯಗತ್ಯ. ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯತೆ ಹಾಗೂ ಹೃದಯವಂತಿಕೆ ಬೆಳೆದಾಗ ಮಾತ್ರ ಯಶಸ್ಸು ಸಾಧ್ಯ. ಈ ಸಂಸ್ಥೆ ಭಕ್ತರ ಸಹಕಾರ ಮತ್ತು ಮಹಾತಪಸ್ವಿ ಅನ್ನದಾನ ಮಹಾಸ್ವಾಮಿಗಳ ತ್ಯಾಗ, ಶ್ರಮ ಹಾಗೂ ಅಕ್ಷರದಾಸೋಹದ ಫಲವಾಗಿ ಇಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದರು.
ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ, ಒಣಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಯ್ಯ ವಸ್ತ್ರದ, ಉಪನ್ಯಾಸಕ ಎಫ್.ಎನ್. ಹುಡೇದ ಇತರರಿದ್ದರು.