ಕನಕಗಿರಿ ತಾಲೂಕನ್ನು ಬರಪೀಡಿತವೆಂದು ಘೋಷಿಸುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ರೈತ ಸಂಘದಿಂದ ತಹಸೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ, ಹನುಮಂತಪ್ಪ ಬಂಡ್ರಾಳ, ವೆಂಕಟೇಶ ಮಲ್ಲಿಗೆವಾಡ, ಶಿವಕುಮಾರ ಬಡಿಗೇರ ಇತರರಿದ್ದರು. 
ಕೊಪ್ಪಳ

ಬರಪೀಡಿತ ಪ್ರದೇಶವೆಂದು ಘೋಷಿಸಲಿ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದಿಂದ ಪ್ರತಿಭಟನೆ
  • ಕನಕಗಿರಿ ತಹಸೀಲ್ದಾರ್ ಚಂದ್ರಶೇಖರಗೆ ಮನವಿ
ಕನಕಗಿರಿ: ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ)ಯಿಂದ ತಹಸಿಲ್ ಕಚೇರಿ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಕನಕಗಿರಿ ತಾಲೂಕು ಶೇ. 95 ಒಣ ಬೇಸಾಯವನ್ನೇ ಆಧರಿಸಿದೆ. ಪ್ರಸಕ್ತ ಮುಂಗಾರು ಮಳೆಗಳು ಕೈಕೊಟ್ಟಿರುವುದರಿಂದ ರೈತರು ಬಿತ್ತಿದ ತೊಗರಿ, ಹತ್ತಿ, ಸಜ್ಜೆ, ನವಣೆ ಸೇರಿ ಇತರೇ ಬೆಳೆಗಳು ಒಣಗಿವೆ. ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿ ತೋಟಗಾರಿಕಾ ಬೆಳೆಗಳ ಬೆಳವಣಿಗೆ ಕುಂಠಿತವಾಗಿವೆ. ಆದರೆ, ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ರೈತರ ಬೆಳೆಗಳತ್ತ ಗಮನವಹಿಸದೆ ನಿರ್ಲಕ್ಷ ವಹಿಸಿವೆ. ಕೂಡಲೇ ಮೂರು ಇಲಾಖೆಗಳು ಸಮೀಕ್ಷೆ ನಡೆಸಿ ಬರ ಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಭೀಮನಗೌಡ ಜೀರಾಳ ಮಾತನಾಡಿ, ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಎಲ್ ನಿನೋ ಎಫೆಕ್ಟ್‌ನಿಂದಾಗಿ ವಿದ್ಯುತ್ ಸಂಪರ್ಕ ಕಡಿತವಾಗುತ್ತಿದ್ದು, ನಿರಂತರ 7 ಗಂಟೆ ವಿದ್ಯುತ್ ಸರಬರಾಜು ಮಾಡಲು ಜೆಸ್ಕಾಂ ಇಇ ಅವರಿಗೆ ಸೂಚಿಸಬೇಕು. ತಾಲೂಕು ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಇಸ್ಪೀಟ್, ಮಟ್ಕಾ, ಅಕ್ರಮ ಮರಳು ಸಾಗಣೆ, ಮದ್ಯ ಮಾರಾಟ ನಿಯಂತ್ರಣಕ್ಕೆ ಇಲಾಖೆಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪರಿಹಾರಕ್ಕೆ ಒತ್ತಾಯ: ತಾಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿ ಮಾಡಬೇಕು. ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದಿಂದ ಅರಿವು ಕಾರ್ಯಕ್ರಮ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕಗೊಳಿಸಿ ರೋಗಿಗಳಿಗೆ ನುಕೂಲ ಮಾಡಿಕೊಡಬೇಕು. ರೈತರ ವೈಯಕ್ತಿಕ ಕಾಮಗಾರಿಗಳಿಗೆ ಬಿಲ್ ಪಾವತಿಸುವುದು, ಸರ್ಕಾರದ ನಿಯಮದಂತೆ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಕ್ರಮವಹಿಸಬೇಕು. ರೈತರ ಬೆಳೆ ವಿಮೆ ಪರಿಹಾರ ದೊರೆಯಲು ಅಗತ್ಯ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಕೃಷಿ ಇಲಾಖೆಯ ಎಡಿ ಅಭಿಲಾಷ, ಎಸ್‌ಎಡಿಎಚ್ ಯೋಗೀಶ, ಜೆಸ್ಕಾಂ ಶಾಖಾಧಿಕಾರಿಗಳಾದ ಮಲ್ಲಿಕಾರ್ಜುನ, ಸಿದ್ದಲಿಂಗಪ್ಪ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಕನಕಗಿರಿ ಹೋಬಳಿ ಘಟಕದ ಅಧ್ಯಕ್ಷ ಹನುಮಂತಪ್ಪ ಬಂಡ್ರಾಳ ಮಾತನಾಡಿದರು. ರೈತರಾದ ವೆಂಕಟೇಶ ಮಲ್ಲಿಗೆವಾಡ, ಶಿವಕುಮಾರ ಬಡಿಗೇರ, ಬಾಲಪ್ಪ ನಾಡಿಗೇರ, ಲಿಂಗಪ್ಪ ಜಾಲಿಹುಡಾ, ರಾಮಲಿಂಗಪ್ಪ ಗದ್ದಿ, ಸಣ್ಣ ಶೇಖರಪ್ಪ ಗದ್ದಿ, ಸೋಮನಾಥ ನಾಯಕ, ಕನಕಪ್ಪ ಗೊಲ್ಲರ ಇತರರಿದ್ದರು.