ಗೋವು ದೇಶದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಒತ್ತಾಯಿಸಿ ಶುಕ್ರವಾರ ಕೊಪ್ಪಳದ ಅಶೋಕ ವೃತ್ತದಲ್ಲಿ ಕರ್ನಾಟಕ ಮುಸ್ಲಿಮ್​ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್​ ಗವಿಸಿದ್ದಪ್ಪ ಮಣ್ಣೂರ ಮನವಿ ಸಲ್ಲಿಸಲಾಯಿತು.ಮುಸ್ಲಿಮ್​ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಮುನೀರ್​ ಅಹ್ಮದ್​ ಸಿದ್ದೀಕಿ, ಜೆ.ಎಮ್​.ವೀರಸಂಗಯ್ಯ, ನಜೀರ್​ ಸಾಬ್​ ಮೂಲಿಮನಿ, ಬಸವರಾಜ್​ ಶೀಲವಂತರ್​, ಶಾಹಿದ್​ ತಹಶೀಲ್ದಾರ್​, ಶೇಖ್​ ಹಿದಾಯತುಲ್ಲಾ ಬಹದ್ದೂರ್​ ಬಂಡಿ, ಎಸ್​.ಎ.ಗಫಾರ್​ ಇದ್ದರು. 
ಕೊಪ್ಪಳ

ಗೋವು ರಾಷ್ಟ್ರ ಪ್ರಾಣಿ ಎಂದು ಘೋಷಿಸಿ

ಪ್ರಮುಖ ಮುಖ್ಯಾಂಶಗಳು

  • ಮುಸ್ಲಿಮ್​ ಸಂಘಟನೆಗಳ ಒಕ್ಕೂಟ ಆಗ್ರಹ
ಕೊಪ್ಪಳ: ಭಾರತೀಯ ಸಂಸತಿಯಲ್ಲಿ ಅತ್ಯುನ್ನತ ಹಾಗೂ ಪವಿತ್ರ ಸ್ಥಾನ ಹೊಂದಿರುವ ಗೋವು ದೇಶದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಒತ್ತಾಯಿಸಿ ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಕರ್ನಾಟಕ ಮುಸ್ಲಿಮ್​ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್​ ಗವಿಸಿದ್ದಪ್ಪ ಮಣ್ಣೂರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ರಫ್ತು ಮಾಡುತ್ತಿರುವ ಕಂಪನಿಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು. ಬಹುಸಂಖ್ಯಾತ ಜನರ ಧಾರ್ಮಿಕ ಶ್ರದ್ಧೆ ಹಾಗೂ ಕೃಷಿ ಪ್ರಧಾನ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಮಹತ್ವ ಅನನ್ಯವಾಗಿದೆ.
ದೇಶದ ಸಾಂಸತಿಕ ಸೌಹಾರ್ದತೆಗಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ. ಗೋಮಾಂಸ ಮಾರಾಟ ಮತ್ತು ರಫ್ತಿನ ಮೇಲೆ ಕಟ್ಟುನಿಟ್ಟಿನ ನಿಯಮಗಳಿದ್ದರೂ, ಭಾರತ ದೇಶದಿಂದ ದೊಡ್ಡ ಮಟ್ಟದಲ್ಲಿ ಮಾಂಸ ರಫ್ತಾಗುತ್ತಿದೆ. ಅಲ್ಲಾನಾ ಸನ್ಸ್​ ಪೆವೇಟ್​ ಲಿಮಿಟೆಡ್​, ಎಚ್​.ಎಂ.ಎ. ಆಗ್ರೋ ಇಂಡಸ್ಟ್ರೀಸ್​, ಅಲ್​-ಕಬೀರ್​ ಎಕ್ಸ್​ಪೋರ್ಟ್ಸ್​, ಎಂ.ಕೆ. ಓವರ್​ಸೀಸ್​ನಂತಹ ಪ್ರಮುಖ 70ಕ್ಕೂ ಹೆಚ್ಚು ದೊಡ್ಡ ಸಂಸ್ಕರಣಾ ಘಟಕಗಳು ಮತ್ತು ರಫ್ತು ಕಂಪನಿಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ರಾಷ್ಟ್ರಾದ್ಯಂತ ಗೋ ರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ನೈತಿಕ ಪೊಲೀಸ್​ ಗಿರಿ ನಡೆಸಿ, ಅನೇಕ ಅಮಾಯಕರ ಕೊಲೆಗೆ ಕಾರಣವಾಗಿರುವ ನಕಲಿ ಗೋ ರಕ್ಷಕರ ವಿರುದ್ಧ ಸಮಗ್ರ ತನಿಖೆ ನಡೆಸಿ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಮುಸ್ಲಿಮ್​ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಮುನೀರ್​ ಅಹ್ಮದ್​ ಸಿದ್ದೀಕಿ, ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಮ್​.ವೀರಸಂಗಯ್ಯ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್​ ಸಾಬ್​ ಮೂಲಿಮನಿ, ಪ್ರಪುಖರಾದ ಬಸವರಾಜ್​ ಶೀಲವಂತರ್​, ಶಾಹಿದ್​ ತಹಶೀಲ್ದಾರ್​, ಶೇಖ್​ ಹಿದಾಯತುಲ್ಲಾ ಬಹದ್ದೂರ್​ ಬಂಡಿ, ಎಸ್​.ಎ.ಗಫಾರ್​, ಚನ್ನಬಸಪ್ಪ ಅಪ್ಪಣವರ್​ ಇತರರಿದ್ದರು.