ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಸಚಿವ ರಾಯರಡ್ಡಿ,
- ಡಿಸಿಸಿ ಅಧ್ಯಕ್ಷ ಅಮರೇಗೌಡ ಮನವಿ
ಕೊಪ್ಪಳ : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವರು ಶ್ರಮಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮನವಿ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಬಸವರಾಜ ರಾಯರಡ್ಡಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಕೊಪ್ಪಳದಿಂದ ಇಬ್ಬರು ಸಚಿವರಾಗಿದ್ದು, ಅರ್ಧಕ್ಕೆ ನಿಂತ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಿ. ಮುನಿರಾಬಾದ್&-ಮೆಹಬೂಬ್ ನಗರ, ತಳಕಲ್-&ವಾಡಿ ರೈಲ್ವೆ ಯೋಜನೆ ಪೂರ್ಣಗೊಳಿಸಿ. ವಿಮಾನ ನಿಲ್ದಾಣ ಅವಶ್ಯವಿದ್ದು ಭೂಮಿ ಖರೀದಿಸಿ. ಜಿಲ್ಲಾ ಕೇಂದ್ರ ಕ್ಷೇತ್ರ ಹಿಂದುಳಿದಿದ್ದು ಅಭಿವೃದ್ಧಿಗೆ ಆದ್ಯತೆ ನೀಡಿ. ಯಲಬುರ್ಗಾದಲ್ಲಿ ಅಭಿವೃದ್ಧಿ ಅಜೀರ್ಣ ಆಗಿದೆ. ಅಲ್ಲಿಗಿಂತ ಹೆಚ್ಚು ಜಿಲ್ಲೆಗೆ ಆದ್ಯತೆ ನೀಡಿ. ಯಾವುದೇ ಖಾತೆ ಸಿಕ್ಕರೂ ಉತ್ತಮ ಕೆಲಸ ಮಾಡುವಂತೆ ಹೇಳಿದರು.
ಸಚಿವ ರಾಯರಡ್ಡಿ, ನನಗೆ ಹಣಕಾಸು ಖಾತೆ ನಿರ್ವಹಣೆ ಇಷ್ಟ. ಜತೆಗೆ ಯೋಜನಾ ಇಲಾಖೆ ನೀಡಿದರೂ ಸ್ವೀಕರಿಸುವೆ. ಗೋವಿಂದರಾವ್ ಆಯೋಗ ವರದಿ ಬಂದಿದ್ದು, ಅದರ ಅನುಸಾರ ಅಭಿವೃದ್ಧಿ ಯೋಜನೆ ರೂಪಿಸಲು ಅನುಕೂಲವಾಗಲಿದೆ. ಯಲಬುರ್ಗಾ ನನ್ನ ತವರು ಮನೆ. ಕೊಪ್ಪಳ ಎರಡನೇ ಮನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಈಗಲೇ ಎಲ್ಲ ಹೇಳಲಾಗದು. ನಮ್ಮಲ್ಲಿ ಯಾವುದೇ ಬಣವಿಲ್ಲ. ಎಲ್ಲರೂ ಒಂದೇ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಪ್ರಮುಖರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಕೃಷ್ಣಾ ಇಟ್ಟಂಗಿ, ಜ್ಯೀತಿ ಗೊಂಡಬಾಳ, ಎಸ್.ಬಿ.ದಾನರಡ್ಡಿ, ಸುರೇಶ ದಾಸರಡ್ಡಿ ಇತರರಿದ್ದರು.
ಹಿಟ್ನಾಳ ಬೆಂಬಲಿಗರು ಗೈರು
ಸಚಿವ ಸ್ಥಾನ ತಪ್ಪಿದ್ದಕ್ಕೆ ಶಾಸಕ ರಾವೇಂದ್ರ ಹಿಟ್ನಾಳ ಹಾಗೂ ಬೆಂಬಲಿಗರು ಮುನಿಸು ಮುಂದುವರೆಸಿದ್ದಾರೆ. ಸಚಿವ ರಾಯರಡ್ಡಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದರೂ ಕೊಪ್ಪಳ ತಾಲೂಕು ಕಾರ್ಯಕರ್ತರು, ಬಹುಪಾಲು ನಾಯಕರು ಬಂದಿರಲಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಕರೆ ಮೇರೆಗೆ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾವೇಂದ್ರ ಹಿಟ್ನಾಳ ಬೆಂಗಳೂರಿಗೆ ತೆರಳಿದ್ದಾರೆಂದು ಸಚಿವ ರಾಯರಡ್ಡಿ ಗೈರು ಸಮರ್ಥಿಸಿಕೊಂಡರು. ಆದರೆ, ಉಳಿದ ಪದಾಧಿಕಾರಿಗಳು ಬಂದಿರಲಿಲ್ಲ.