ಕೊಪ್ಪಳ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಇದ್ದರು.
- ಡಿಸಿ ಡಾ. ಸುರೇಶ ಇಟ್ನಾಳ ಮನವಿ
ಕೊಪ್ಪಳ : ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದ ಅಂಗವಾಗಿ 2026ರ ಜೂನ್ 30ರಿಂದ ಜುಲೈ 29ರವರೆಗೆ ಮನೆಮನೆಗೆ ಭೇಟಿ ನೀಡಲಿರುವ ಗಣತಿದಾರರು ಹಾಗೂ ಬಿಎಲ್ಒಗಳಿಗೆ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮನವಿ ಮಾಡಿದರು.
ಗುರುವಾರ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದು ಪರಿಷ್ಕರಣಾ ಕಾರ್ಯದ ಪ್ರಮುಖ ಉದ್ದೇಶವಾಗಿದೆ ಎಂದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳಿಗೂ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದ್ದು, ಪಾರದರ್ಶಕವಾಗಿ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗವು 2026ರ ಮೇ 14ರಂದು ಅಧಿಸೂಚನೆ ಹೊರಡಿಸಿ ಮತದಾರರ ಪಟ್ಟಿ ಪರಿಷ್ಕರಣೆಗೆ ವೇಳಾಪಟ್ಟಿ ಪ್ರಕಟಿಸಿದೆ. 2002ರ ನಂತರ ಇದೀಗ ಮತ್ತೊಮ್ಮೆ ಎಸ್.ಐ.ಆರ್. ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. 2025ರ ಮತದಾರರ ಪಟ್ಟಿಯಲ್ಲಿರುವವರನ್ನು 2010ರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದು ಹೇಳಿದರು.
ಜೂನ್ 30ರಿಂದ ಒಂದು ತಿಂಗಳ ಕಾಲ ಬಿಎಲ್ಒಗಳು ಮನೆಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಮತದಾರರು ತಮ್ಮ ಹೆಸರು ಒಂದೇ ಮತದಾರರ ಪಟ್ಟಿಯಲ್ಲಿ ಇರುವುದಾಗಿ ಹಾಗೂ ಬೇರೆ ಯಾವುದೇ ದೇಶದ ಪೌರತ್ವ ಹೊಂದಿಲ್ಲ ಎಂಬ ಘೋಷಣೆಯನ್ನು ಸಲ್ಲಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು ಹಾಗೂ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವೂ ಇರುತ್ತದೆ ಎಂದು ತಿಳಿಸಿದರು.
ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ನಕಲಿ ಮತದಾರರನ್ನು ಗುರುತಿಸಿ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 2025ರ ಮತದಾರರ ಪಟ್ಟಿಯಲ್ಲಿರುವ 11,92,307 ಮತದಾರರ ಪೈಕಿ 11,34,937 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, 57,370 ಮತದಾರರ ಮ್ಯಾಪಿಂಗ್ ಕಾರ್ಯ ಬಾಕಿಯಿದೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಇದ್ದರು.