ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ಉಮೇಶ ಸಿಂಗನಾಳ್, ಸಹಾಯಕ ಕ್ರೀಡಾಧಿಕಾರಿ ಯಂಕಪ್ಪ ತಳವಾರ್ ಇತರರಿದ್ದರು.
- ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ ಅಭಿಮತ
- ಗಂಗಾವತಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಗಂಗಾವತಿ; ಸ್ಪರ್ಧಾ ಮನೋಭಾವದಿಂದ ಕ್ರೀಡಾಪಟುಗಳು ಆಟೋಟಗಳಲ್ಲಿ ಭಾಗವಹಿಸಬೇಕು. ತೀರ್ಪುಗಾರರ ನಿರ್ಣಯಗಳಿಗೆ ಬದ್ಧರಾಗಿರಬೇಕು ಎಂದು ಶಿಕ್ಷಣ ಇಲಾಖೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಾತನಾಡಿದರು. ದಸರಾ ಕ್ರೀಡಾಕೂಟಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲಾಗಿದೆ. ಈ ಭಾಗದ ಕ್ರೀಡಾಪಟುಗಳು ಮೈಸೂರು ದಸರಾದಲ್ಲೂ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು, ಪ್ರಯತ್ನಿಸಿದರೆ ಅವಕಾಶ ಪಡೆಯಬಹುದಾಗಿದೆ ಎಂದರು.
ಸಹಾಯಕ ಕ್ರೀಡಾಧಿಕಾರಿ ಯಂಕಪ್ಪ ತಳವಾರ್ ಮಾತನಾಡಿ, ವೈಯಕ್ತಿಕ ಮತ್ತು ಗುಂಪು ಆಟಗಳಿಗೆ ಆದ್ಯತೆಯಿದ್ದು, ಆನ್‌ಲೈನ್ ಮೂಲಕ 250ಕ್ಕೂ ಹೆಚ್ಚು ಕ್ರೀಡಾಪಟುಗಳು ಹೆಸರು ನೋಂದಾಯಿಸಿದ್ದಾರೆ ಎಂದರು. ರಾಯಚೂರು ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ರಂಗಸ್ವಾಮಿ ನಾಯಕ, ನಗರಸಭೆ ಮಾಜಿ ಸದಸ್ಯ ಸಿಂಗನಾಳ ಉಮೇಶ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಹುಸೇನ್‌ಸಾಬ್ ಮಕಾನ್‌ದಾರ್, ಬಸವಂತಪ್ಪ, ರಮೇಶ ಹಾದಿಮನಿ ಇತರರಿದ್ದರು.
ಅವ್ಯವಸ್ಥೆ ಕಂಡು ಹೊರನಡೆದ ಶಾಸಕ: ದಸರಾ ಕ್ರೀಡಾಕೂಟವನ್ನು ಕಾಟಾಚಾರಕ್ಕೆ ಎಂಬಂತೆ ಆಯೋಜಿಸಿದ್ದ ಸಂಘಟಕರನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಹೊರನಡೆದರು. ಕ್ರೀಡಾಕೂಟಕ್ಕೆ 60 ಸಾವಿರ ರೂ. ಸರ್ಕಾರ ನೀಡುತ್ತಿದ್ದು, ಸಮರ್ಪಕ ಬಳಸಿಕೊಳ್ಳದೆ ಸಂಘಟಕರು ದುರ್ಬಳಕೆ ಮಾಡಿಕೊಂಡಿದ್ದಾರೆ. ಕನಿಷ್ಠ ಸೌಲಭ್ಯಗಳ ವ್ಯವಸ್ಥೆಯಿಲ್ಲದೆ ಕ್ರೀಡಾಪಟುಗಳು ಪರದಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಂಭೀರ ಪರಿಗಣಿಸಿಲ್ಲ. ಇನ್ನೂ ಸರ್ಕಾರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರ ಬದಲಾಗಿ ಖಾಸಗಿ ಶಾಲೆ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಾರಸ್ಸು ಮಾಡಲಾಗುವುದು ಎಂದು ರೆಡ್ಡಿ ಎಚ್ಚರಿಸಿದರು. ಶಾಸಕರು ಮೈದಾನಕ್ಕೆ ಬರುವ ಮೊದಲೇ ಕ್ರೀಡಾಜ್ಯೋತಿ ಉದ್ಘಾಟಿಸಿದ್ದು, ರೆಡ್ಡಿಯನ್ನು ಮತ್ತಷ್ಟು ಕೆರಳಿಸಿತು.