ಕನಕಗಿರಿಯ ಮೇಲುಗಡೆ ಅಗಸೆಯಲ್ಲಿನ ಅಲಾಯಿ ಕುಣಿಗೆ ಹಾಕಲು ಮರದ ದಿನ್ನೆಗಳನ್ನು ಎಳೆಯುತ್ತಿರುವ ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿರುವುದು.
- ಟ್ರ್ಯಾಕ್ಟರ್-ಎತ್ತುಗಳ ಮೂಲಕ ಎಳೆದು ತಂದ ಭಕ್ತರು
- ಪೀರಲು ದೇವರುಗಳಿಗೆ ಸಕ್ಕರೆ ಉದಿಸಿ ಕತ್ತಲ ರಾತ್ರಿ ಆಚರಣೆ
ಕನಕಗಿರಿ: ಮೊಹರಂ ಹಬ್ಬದ ನಿಮಿತ್ತ ಗುರುವಾರ ಭಕ್ತರು ಎತ್ತು, ಟ್ರ್ಯಾಕ್ಟರ್‌ಗಳ ಮೂಲಕ ಅಲಾಯಿ ದೇವರ ಕುಣಿಗೆ ಬೃಹತ್ ಮರಗಳನ್ನು ಅರ್ಪಿಸಿದರು.
ಪಟ್ಟಣದ ಮೇಲುಗಡೆ ಹಾಗೂ ಆನೆಗೊಂದಿ ಅಗಸಿ ಎರಡು ಕಡೆಗಳಲ್ಲಿನ ಹಸೇನ್, ಹುಸೇನ್, ಹೊನ್ನೂರುಬಾಬ, ಲಾಲಸಾಬ, ಹಟೇಲ್‌ಬಾಷಾ ಸೇರಿ ನಾನಾ ಅಲಾಯಿ ದೇವರಿಗೆ ಮರದ ದಿನ್ನೆಗಳನ್ನು ಅರ್ಪಿಸಿ ಭಕ್ತಿ ಮೆರೆದರು. ಸಂಜೆಯಾಗುತ್ತಲೆ ಭಕ್ತರು ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪೀರಲು ದೇವರುಗಳಿಗೆ ಸಕ್ಕರೆ, ಊದಿನಕಡ್ಡಿ, ಬೆಲ್ಲದ ಹಾಲನ್ನು ನೈವೈದ್ಯವಾಗಿ ಸಮರ್ಪಿಸಿ ಕತ್ತಲ ರಾತ್ರಿ ಆಚರಿಸಿದರು.
ರಾಜಬೀದಿ ಮೂಲಕ ಕೆಳ ಅಗಸೆ ಮಸೀದಿಗೆ ಹಾಗೂ ಸೊಸೈಟಿ ಮೂಲಕ ಮೇಲುಗಡೆ ಮಸೀದಿಗೆ ಮರದ ದಿನ್ನೆಗಳನ್ನು ಎಳೆಸಲಿಕ್ಕಾಗಿಯೇ ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಎತ್ತುಗಳು ಬೃಹತ್ ಮರದ ದಿನ್ನೆಗಳನ್ನು ಎಳೆಯುತ್ತಿದ್ದಂತೆ ನೆರೆದಿದ್ದ ಯುವಕರು ಕೇಕೆ ಚಪ್ಪಾಳೆ ಹಾಕಿ ಸಂಭ್ರಮಿಸುವುದು ಒಂದೆಡೆಯಾದರೆ, ಭಾರದ ಮರದ ದಿನ್ನೆಗಳನ್ನು ಎಳೆಯಲು ಸಾಹಸಪಡುತ್ತಿದ್ದ ಎತ್ತುಗಳಿಗೆ ಬಾರುಕೋಲು ಏಟು ಬೀಳುವುದನ್ನು ನೋಡಿ ಪ್ರಾಣಿಪ್ರಿಯರು ಬೇಸರ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿತ್ತು.