ಕೊಪ್ಪಳ : ಅಹಿಂದ ಸಮುದಾಯದ ಪ್ರಬಲ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಅವಮಾನಕರವಾಗಿ ಕೆಳಗಿಳಿಸಿದ್ದಕ್ಕೆ ಕಾಂಗ್ರೆಸ್ ಸಕಾರಣಗಳನ್ನು ನೀಡಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಅಸಮರ್ಥತೆ ಹಾಗೂ ಅದಕ್ಷತೆ ಕಾರಣದಿಂದ ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ. ಸಿದ್ದರಾಮಯ್ಯ ಅಸಮರ್ಥರೇ ? ದಕ್ಷತೆ, ಸಾಮರ್ಥ್ಯ ಇಲ್ಲವೆಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತಾ ? ಇದೇ ಕಾರಣವಾಗಿದ್ದರೆ ಮೂರು ವರ್ಷ ಕಾಂಗ್ರೆಸ್ ಏನು ಮಾಡುತ್ತಿತ್ತು ? ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಕಾಂಗ್ರೆಸ್ ಬೆಲೆ ತೆರಬೇಕಾಗಲಿದೆ. ರಾಜೀನಾಮೆಗೆ ಕಾರಣವೇನೆಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅವೈಜ್ಞಾನಿಕ ಯೋಜನೆಗಳಿಂದ ಆಡಳಿತದ ಮೇಲೆ ಸಿದ್ದರಾಮಯ್ಯ ನಿಯಂತ್ರಣ ಕಳೆದುಕೊಂಡಿದ್ದರು. ದುರಾಡಳಿತದಿಂದ ಹಳಿ ತಪ್ಪಿದ್ದ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಅವರ ಉತ್ತರಾಧಿಕಾರಿಗೆ ಸಾಧ್ಯವೇ ಇಲ್ಲ. ಈ ಪರಿಸ್ಥಿತಿಯಲ್ಲಿ ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆ ಎದುರಿಸುವುದೇ ಸೂಕ್ತ. ಅಹಿಂದ ವರ್ಗ ಕಾಂಗ್ರೆಸ್ ಪಕ್ಷದಿಂದ ದೂರ ಸರಿಯಲಿದೆ. ವೀರೇಂದ್ರ ಪಾಟೀಲ್ ಅವರನ್ನು ಅವಮಾನಿಸಿ ಪ್ರಬಲ ಸಮುದಾಯದ ವಿರೋಧ ಕಟ್ಟಿಕೊಂಡಿದ್ದ ಕಾಂಗ್ರೆಸ್; ಈಗ ಸಿದ್ದರಾಮಯ್ಯಗೆ ಅವಮಾನಿಸಿ ಅಹಿಂದ ವರ್ಗದ ವಿರೋಧ ಕಟ್ಟಿಕೊಳ್ಳಲಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದಿಂದ ಹೊರಬಂದು ತಮ್ಮತನವನ್ನು ಕಾಪಾಡಿಕೊಳ್ಳಲಿ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.