- ಮರು ಪರಿಶೀಲನೆಗೆ ಚಿಂತನೆ
- ಸ್ಥಳಿಯ ಕಲಾವಿದರಿಗೆ ಸಿಂಹಪಾಲು ?
ವಿಜಯವಾಣಿ ವಿಶೇಷ ಕೊಪ್ಪಳ: ರಾಜ್ಯದಲ್ಲಿ ಪ್ರತಿ ವರ್ಷ ಜರುಗುವ ರಾಜ್ಯ, ಜಿಲ್ಲಾಮಟ್ಟದ ಉತ್ಸವಗಳ ಆಚರಣೆಗೆ ಎರಡು ವರ್ಷದ ಹಿಂದೆ ಸರ್ಕಾರ ಸಾಂಸ್ಕೃತಿಕ ನೀತಿ ಘೋಷಿಸಿದೆ. ಸ್ಥಳಿಯ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮರು ಪರಿಶೀಲನೆಗೆ ಚಿಂತನೆ ನಡೆಸಿದ್ದು ಕನಕಗಿರಿ ಉತ್ಸವದಿಂದಲೇ ಅನುಷ್ಠಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜಿಸಿದೆ.
ನಾಡು, ಆಯಾ ಜಿಲ್ಲೆಯ ಇತಿಹಾಸ, ಸಾಂಸ್ಕೃತಿಕ ಹಿರಿಮೆ, ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ಉತ್ಸವ ಆಯೋಜನೆಗೊಳ್ಳುತ್ತವೆ. ಮುಂದಿನ ಪೀಳಿಗೆಗೆ ಇತಿಹಾಸ ವರ್ಗಾಯಿಸುವ ಜತೆಗೆ ಗತ ವೈಭವದ ಪರಿಚಯಿಸುವ ಯೋಜನೆ ಹೊಂದಿದೆ. ಇತ್ತೀಚೆಗೆ ಉತ್ಸವಗಳೆಂದರೆ ಸಿನಿಮಾ ತಾರೆಯರು, ಡಾನ್ಸ್, ರಾಜಕೀಯ ಭಾಷಣವೇ ಎಂಬಂತಾಗಿದೆ. ಜನರನ್ನು ಹಿಡಿದಿಡಲು ಜನಪ್ರಿಯ ನಾಯಕರನ್ನು ಕರೆಸುವುದೂ ಅನಿವಾರ್ಯ ಎಂಬಂತಾಗಿದೆ. ಎರಡನ್ನು ಸರಿದೂಗಿಸುವ ಸವಾಲು ಸರ್ಕಾರದ ಹೆಗಲೇರಿದೆ.
ಉತ್ಸವಗಳಿಗೆ ಸಾಂಸ್ಕೃತಿಕ ನೀತಿ ರೂಪಿಸುವ ನಿಟ್ಟಿನಲ್ಲಿ ಆಗಾಗ ತಜ್ಞರು, ಅನುಭವಿಗಳ ಸಮಿತಿ ರಚಿಸಿ ಸಲಹೆ ಪಡೆಯವ ಕೆಲಸ ನಡೆಯುತ್ತಿದೆ. ಹಿಂದೆಯೂ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಾಂಸ್ಕೃತಿಕ ನೀತಿಗೆ ಕೆಲವೊಂದು ಶಿಫಾರಸ್ಸು ಮಾಡಿದೆ. ಅದರಂತೆ 2024ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ಸವ ಆಯೋಜಿಸಲು ಆಯಾ ಜಿಲ್ಲೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದೆ. ಆದರೂ ಶಿಫಾರಸ್ಸುಗಳು ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ.
ರಾಜ್ಯಮಟ್ಟದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಲಾಭಿ ನಡೆಸಿ ವೇದಿಕೆ, ಕಲಾವಿದರು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಅಂತಿಮಗೊಳಿಸುತ್ತಾರೆ. ಅವರೇ ಸಿಂಹಪಾಲು ಪಡೆವ ಮೂಲಕ ಸ್ಥಳಿಯ ಕಲಾವಿದರಿಗೆ ನಿರೀಕ್ಷೆಯಂತೆ ಆದ್ಯತೆ ದೊರೆಯುತ್ತಿಲ್ಲವೆಂಬ ಆರೋಪ ಹೆಚ್ಚುತ್ತಿವೆ. 2024ರಲ್ಲಿ ನಡೆದ ಕನಕಗಿರಿ ಉತ್ಸವದಲ್ಲೂ ಸ್ಥಳಿಯರಿಗಿಂತ ಹೊರಗಿನವರಿಗೆ ಆದ್ಯತೆ ಕಲ್ಪಿಸಿದ್ದು ಹಾಗೂ ಬಿಲ್ ನೀಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳೂ ವ್ಯಕ್ತವಾಗಿದ್ದವು.
ತಜ್ಞರ ಸಭೆ ಶ್ರೀ
ಹಿಂದೆ ತಜ್ಞರ ಸಮಿತಿ ರಾಜ್ಯ ಹಾಗೂ ಜಿಲ್ಲಾಮಟ್ಟದ ಉತ್ಸವಗಳಿಗೆ ಯಾರಿಗೆ ಎಷ್ಟು ಆದ್ಯತೆ ನೀಡಬೇಕೆಂಬ ಬಗ್ಗೆ ಸಲಹೆ ನೀಡಿದೆ. ರಾಜ್ಯಮಟ್ಟದ ಉತ್ಸವ ಆಗಿದ್ದಲ್ಲಿ ಶೇ.75ರಷ್ಟು ರಾಜ್ಯದ ಕಲಾವಿದರಿಗೆ ಆದ್ಯತೆ ನೀಡಬೇಕು. ಬಾಕಿ ಶೇ.25ರಷ್ಟು ರಾಷ್ಟ್ರ, ಅಂತಾರಾಷ್ಟ್ರೀಯ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು. ಜಿಲ್ಲಾ ಮಟ್ಟದ ಉತ್ಸವ ಆದಲ್ಲಿ ಆಯಾ ಜಿಲ್ಲೆಯ ಕಲಾವಿದರಿಗೆ ಶೇ.75ರಷ್ಟು ಅವಕಾಶ ನೀಡಬೇಕು. ಬಾಕಿ ಶೇ.25ರಷ್ಟು ರಾಜ್ಯ, ರಾಷ್ಟ್ರಮಟ್ಟದ ಕಲಾವಿದರಿಗೆ ಆದ್ಯತೆ ನೀಡುವಂತೆ ತಿಳಿಸಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಹೊತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕನಕಗಿರಿ ಉತ್ಸವದಲ್ಲಿ ಸ್ಥಳಿಯ ಕಲಾವಿದರಿಗೆ ಮೊದಲ ಆಯ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಉತ್ಸವಗಳಿಗೆ ಸಾಂಸತಿಕ ನೀತಿ ರೂಪಿಸುವ ಸಂಬಂಧ ಮತ್ತೊಂದು ಸಭೆ ನಡೆಸಿ ಅಂತಿಮಗೊಳಿಸಲು ಇಲಾಖೆ ಯೋಜಿಸಿದೆ.
ಉತ್ಸವಗಳ ಆಚರಣೆಗಾಗಿ ಸಾಂಸ್ಕೃತಿಕ ನೀತಿ ಜಾರಿಗೊಳಿಸಲಾಗುವುದು. ಹಿಂದೆ ಸಮಿತಿ ಕೆಲ ಶಿಾರಸ್ಸು ಮಾಡಿದೆ. ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶ್ರೀ ತಜ್ಞರು, ಸಮಿತಿ ಸದಸ್ಯರ ಸಭೆ ನಡೆಸಿ ಕೆಲವೊಂದಿಷ್ಟ ಮಾರ್ಪಾಡು ಮಾಡಲಾಗುವುದು. ಎಲ್ಲರಿಗೂ ಮನ್ನಣೆ ನೀಡುತ್ತೇವೆ.
— ಶಿವರಾಜ ತಂಗಡಗಿ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ.
ಕನಕಗಿರಿ ಉತ್ಸವಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಲಾವಿದರ ಆಯ್ಕೆ ಅರ್ಜಿ ಆಹ್ವಾನಿಸಲಾಗಿದೆ. ನಿಯಮಾನುಸಾರ ಎಲ್ಲ ನಡೆಸಲಾಗುವುದು. ಸಮಿತಿಗಳನ್ನು ರಚಿಸಿದ್ದು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
— ಡಾ.ಸುರೇಶ ಬಿ.ಇಟ್ನಾಳ. ಕೊಪ್ಪಳ ಜಿಲ್ಲಾಧಿಕಾರಿ