ಕನಕಗಿರಿ ತಾಲೂಕಿನ ಗೋಡಿನಾಳ ಗ್ರಾಮದ ಸರ್ಕಾರಿ ಜಮೀನಿಗೆ ನಕಲಿ ಸಾಗುವಳಿ ಚೀಟಿ ಸೃಷ್ಟಿಸಿ ಅಮಾಯಕ ರೈತರಿಂದ ಹಣ ದೋಚಿದ ಮಧ್ಯವರ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣ ಎಡಿಸಿ ಸಿದ್ರಾಮೇಶರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಸಂತೋಷ, ಸದಸ್ಯ ಪಾಪೇಶ ಗೌಡ ಇದ್ದರು.
- ಬೇನಾಮಿ
- ಮಧ್ಯವರ್ತಿಗಳು
- ಕರ್ನಾಟಕ
ಕನಕಗಿರಿ:ತಾಲೂಕಿನ ಗೋಡಿನಾಳ ಗ್ರಾಮದ ಸರ್ವೇ ನಂ.37ರಲ್ಲಿನ ಸರ್ಕಾರಿ ಆಸ್ತಿಗೆ ಮಧ್ಯವರ್ತಿಗಳು ನಕಲಿ ಸಾಗುವಳಿ ಚೀಟಿ ಸೃಷ್ಟಿಸುತ್ತಿದ್ದು, ಅಂಥಹವರ ವಿರುದ್ಧ ಕ್ರಮ ವಹಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದಿಂದ ಎಡಿಸಿ ಸಿದ್ರಾಮೇಶ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಜಮೀನುಗಳನ್ನೇ ಗುರಿಯಾಗಿಸಿಕೊಂಡ ಬೇನಾಮಿ ಮಧ್ಯವರ್ತಿಗಳು ಕಣ್ಣುಹಾಯಿಸಿದ್ದಾದರೆ. ಈ ಜಮೀನಿನಲ್ಲಿ ಈಗಾಗಲೇ ಬಡ ಅರ್ಹ ರೈತರು ಸಾಗುವಳಿ ಮಾಡುತ್ತಿದ್ದಾರೆ.
ಅವರ ಹೆಸರಿನಲ್ಲಿ ದಾಖಲೆಗಳು ಸಹ ಇವೆ. ಆದರೆ, ಇನ್ನುಳಿದ ಭೂಮಿಗೆ ಕಣ್ಣಿಟ್ಟಿರುವ ಮಧ್ಯವರ್ತಿಗಳು ಹಿಂದಿನ ತಹಸೀಲ್ದಾರ್ ಫೋರ್ಜರಿ ಸಹಿಯೊಂದಿಗೆ 2006ರ ನಕಲಿ ಸಾಗುವಳಿ ಚೀಟಿ ಸೃಷ್ಟಿಸಿ, ಅಮಾಯಕರಿಂದ 2ಲಕ್ಷ ರೂ. ಹೊಡೆದಿದ್ದಾರೆ. ಇನ್ನಷ್ಟು ರೈತರಿಗೆ ಸಾಗುವಳಿ ಚೀಟಿ ನೀಡುವ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ನಮಗೆ ಜಮೀನು ದೊರೆಯಲಿದೆ ಎನ್ನುವ ರೈತರಿಗೆ ನಕಲಿ ಸಾಗುವಳಿ ಚೀಟಿ ಸಮಸ್ಯೆಯಾಗಲಿದೆ.
ಈ ಬಗ್ಗೆ ವಿಜಯವಾಣಿಯಲ್ಲಿ ಪ್ರಕಟವಾದ ವಿಶ್ರುತ ವರದಿ ಉಲ್ಲೇಖಿಸಿಸಲಾಗಿದೆ. ಈ ನಿಟ್ಟಿನಲ್ಲಿ ನಕಲಿ ಸಾಗುವಳಿ ಚೀಟಿ ಸೃಷ್ಟಿಸಿ ಅಮಾಯಕರಿಗೆ ಮೋಸ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರು ಬಲಿಯಾಗುವುದನ್ನು ತಡೆಯಬೇಕು ಎಂದು ಎಡಿಸಿ ಸಿದ್ರಾಮೇಶ ಅವರಿಗೆ ಮನವಿ ಸಲ್ಲಿಸಲಾಯಿತು.