ಮಹ್ಮದ್ ಜುಬೇರ್ 
ಕೊಪ್ಪಳ

ಕಾರ್ಯಕರ್ತರಲ್ಲಿ ಅನಗತ್ಯ ಗೊಂದಲ ಸೃಷ್ಟಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ
  • ಪ್ರಚಾರ
  • ಸಮಿತಿ ಉಪಾಧ್ಯಕ್ಷ
ಗಂಗಾವತಿ: ಕ್ಷೇತ್ರದ ವಿಚಾರದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದು, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಡಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಮಹ್ಮದ್ ಜುಬೇರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರನ್ನು ಮೇಲ್ನೋಟಕ್ಕೆ ಅಣ್ಣ ಅಂತಾ ಹೇಳುವ ಸಂಸದ ರಾಜಶೇಖರ್ ಹಿಟ್ನಾಳ್, ಕ್ಷೇತ್ರದ ಅಭಿವೃದ್ಧಿ ಚಿಂತನೆ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ.ಬಿಎಲ್‌ಎ1 ನೇಮಕ ವಿಚಾರದಲ್ಲಿ ಅನ್ಸಾರಿಯವರನ್ನು ಬೆಂಬಲಿಸಬೇಕಿದ್ದ ರಾಜಶೇಖರ್ ಹಿಟ್ನಾಳ್, ಪಕ್ಷದ ಮುಖಂಡರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ.
ಗಂಗಾವತಿ ಕ್ಷೇತ್ರದ ಬೂತ್‌ಮಟ್ಟದಲ್ಲಿ ಪಕ್ಷದ ಬಗ್ಗೆ ಮತ್ತು ಇಲ್ಲಿನ ರಾಜಕೀಯ ವಿದ್ಯಮಾನದ ಬಗ್ಗೆ ಗೊತ್ತಿಲ್ಲದೇ, ಬಿಎಲ್‌ಎ 1 ಜವಾಬ್ದಾರಿವಹಿಸಿಕೊಂಡಿದ್ದು ಸರಿಯಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳು ಬರಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಂಘಟನೆ ಕಾರಣ. ರಾಜ್ಯದ 224ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯಾ ಕ್ಷೇತ್ರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರೂ, ಇಬ್ಬರೂ ಪಾಲಿಸಿಲ್ಲ.
ಸಂಸದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅನಗತ್ಯ ಹಸ್ತಕ್ಷೇಪ ಹೆಚ್ಚುತ್ತಿದೆ. ಅಭಿವೃದ್ಧಿ ಹಿತ ದೃಷ್ಟಿಯಿಂದ ಅಧಿಕಾರಿಗಳ ವರ್ಗಾವಣೆಗೆ ಅನ್ಸಾರಿ ನಿರ್ಧಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಡ್ಡಗಾಲು ಹಾಕುತ್ತಿದ್ದು, ಪಕ್ಷದ ಪದಾಧಿಕಾರಿಗಳ ನೇಮಕದಲ್ಲೂ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರ ಹಿಂದೆ ತಿರುಗುವ ಡಿಸಿಸಿ ಅಧ್ಯಕ್ಷ ಅಮರೇಗೌಡ ಭಯ್ಯಪುರ, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ವಿಚಾರದಲ್ಲಿ ಎಷ್ಟು ಕಾರ್ಯಕ್ರಮ ಆಯೋಜಿಸಿದ್ದಾರೆ ಎಂಬ ಬಗ್ಗೆ ಬಹಿರಂಗಪಡಿಸಬೇಕು ಎಂದರು.