ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಿದ್ದ ಹತ್ತಿ ಬೆಳೆಯಲ್ಲಿ ಅಧಿಕ ಸಾಂದ್ರತೆ ಕುರಿತ ಅರಿವು ಕಾರ್ಯಗಾರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಡೀನ್​ ಡಾ. ಎಂ. ಭೀಮಣ್ಣ ಉಪನ್ಯಾಸ ನೀಡಿದರು. 
ಕೊಪ್ಪಳ

ಹತ್ತಿ ಬೇಸಾಯ ವೆಚ್ಚ ಕಡಿಮೆ, ಆದಾಯ ಹೆಚ್ಚು

ಪ್ರಮುಖ ಮುಖ್ಯಾಂಶಗಳು

  • ಡಾ. ಎಂ. ಭೀಮಣ್ಣ ಸಲಹೆ
ಕೊಪ್ಪಳ : ಅಧಿಕ ಸಾಂದ್ರತೆಯ ಹತ್ತಿ ಬೇಸಾಯ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದರಿಂದ ಕೃಷಿ ವೆಚ್ಚವನ್ನು ಕಡಿಮೆ ಮಾಡಿ ರೈತರ ಆರ್ಥಿಕ ಆದಾಯವನ್ನು ಹೆಚ್ಚಿಸಬಹುದು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಡೀನ್​ ಡಾ. ಎಂ. ಭೀಮಣ್ಣ ಹೇಳಿದರು.
ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹತ್ತಿ ಬೆಳೆಯಲ್ಲಿ ಅಧಿಕ ಸಾಂದ್ರತೆ ಕುರಿತ ಅರಿವು ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು.
ತೀವ್ರ ಸಾಂದ್ರತೆಯ ಹತ್ತಿ ಬೇಸಾಯ ತಾಂತ್ರಿಕತೆಯನ್ನು ರಾಯಚೂರು ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಅನುಭವವನ್ನು ಹಂಚಿಕೊಂಡರು, ಬಿತ್ತನೆಯಿಂದ ಕಟಾವಿನವರೆಗೆ ಅನುಸರಿಸಬೇಕಾದ ನೂತನ ಕೃಷಿ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಿ. ಈ ತಾಂತ್ರಿಕತೆಗಳ ಅಳವಡಿಸಿಕೊಂಡರೆ ಉತ್ಪಾದನಾ ವೆಚ್ಚ ತಗ್ಗಿ, ಹೆಚ್ಚಿನ ಇಳುವರಿ ಹಾಗೂ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಕಪಾಸ್​ ಕಾಂತಿ ಯೋಜನೆ ಜಾರಿಗೆ ತರಲಾಗಿದ್ದು, ಮೊದಲ ಹಂತದಲ್ಲಿ ಯಲಬುರ್ಗಾ ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಯೋಜನೆ ವಿಸ್ತರಿಸಲಾಗುವುದು ಎಂದು ಹೇಳಿದರು.
ರಾಯಚೂರು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಆರ್​.ಎ. ಪಾಟೀಲ ಮಾತನಾಡಿ, ತಮ್ಮ ಜಮೀನಿನಲ್ಲಿ ಅಧಿಕ ಸಾಂದ್ರತೆಯ ಹತ್ತಿ ಬೆಳೆದು ಉತ್ತಮ ಇಳುವರಿ ಪಡೆದ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು.
ಕೃಷಿ ತಂತ್ರಜ್ಞರ ಸಂಸ್ಥೆಯ ಕೊಪ್ಪಳ ಅಧ್ಯಾಯದ ಉಪಾಧ್ಯಕ್ಷ ವೀರಣ್ಣ ಕಮತ, ರಾಯಚೂರು ಕೃಷಿ ತಂತ್ರಜ್ಞರ ಸಂಸ್ಥೆಯ ಖಜಾಂಚಿ ವೆಂಕಟೇಶ್ವರಾವ್​, ಪ್ರಮುಖರಾದ ಹರಿಚೇತನ, ವೆಂಕಪ್ಪ ಅತ್ತಾರ, ವಾಮನಮೂರ್ತಿ, ಭೀಮಣ್ಣ ಶಾಡ್ಲಿಗೇರಿ, ಮಲ್ಲಿಕಾರ್ಜುನ ಗಡಗಿ, ಸಣ್ಣಬಸನಗೌಡ ವದಗನಾಳ, ಪ್ರತಾಪಗೌಡ, ರವಿತೇಜ ಅಬ್ಬಿಗೇರಿ ಇತರರಿದ್ದರು.