ಬಣಜಿಗ ಸಮುದಾಯದ ಮೀಸಲು ವರ್ಗೀಕರಣ ಸರಿಪಡಿಸಲು ಒತ್ತಾಯಿಸಿ ಸಮುದಾಯ ಮುಖಂಡರು ಗುರುವಾರ ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಿದರು. ಪ್ರಮುಖರಾದ ವೀರೇಶ ಬಂಗಾರಶೆಟ್ರ, ಅಂದಪ್ಪ ಜವಳಿ, ಸಂಗಣ್ಣ ಟೆಂಗಿನಕಾಯಿ, ಮಲ್ಲಣ್ಣ ಪಾವಲಿ, ಶರಣಪ್ಪ ಬಳಗಾನೂರ, ಶರಣಪ್ಪ ಗದ್ದಿ, ರಾಚಪ್ಪ ಅಂಗಡಿ, ಬಸವರಾಜ ಪಗಡದಿನ್ನಿ ಇದ್ದರು.
- ಬಣಜಿಗ ಸಮುದಾಯದಿಂದ ಡಿಸಿಗೆ ಮನವಿ
ಕೊಪ್ಪಳ: ಬಣಜಿಗ ಸಮುದಾಯಕ್ಕೆ 2ಎ ಮೀಸಲು ನೀಡುವಂತೆ ಒತ್ತಾಯಿಸಿ ಸಮುದಾಯ ಪ್ರಮುಖರು ಗುರುವಾರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಮುದಾಯ ಜಿಲ್ಲಾಧ್ಯಕ್ಷ ವೀರೇಶ ಬಂಗಾರಶೆಟ್ರ ಮಾತನಾಡಿ, ನಮ್ಮ ಸಮುದಾಯ ಶಿಕ್ಷಕಿ ಸುಮಿತ್ರ ಹಾಗೂ ರಾಜ್ಯ ಸರ್ಕಾರ ಮತ್ತು ನಾಗರಾಜ ಶಿವಬಸಪ್ಪ ವಿರುದ್ಧ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಸೂಕ್ತ ನಿರ್ದೇಶನ ನೀಡಿದೆ. ಬಣಜಿಗ ಸಮುದಾಯವನ್ನು ಉದ್ಯೋಗ ಉದ್ದೇಶಕ್ಕೆ ಪ್ರವರ್ಗ ಡಿ ಹಾಗೂ ಶಿಕ್ಷಣ ಉದ್ದೇಶಕ್ಕಾಗಿ ಪ್ರವರ್ಗ ಬಿ ಅಡಿ ವರ್ಗಿಕರಿಸಿರುವುದು ಸಂವಿಧಾನ ಪರಿಚ್ಛೇದದ ಉಲ್ಲಂಘನೆಯಾಗಿದೆ. ಪರಿಚ್ಛೇದ 16(4) ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿ ಮರುವರ್ಗೀಕರಿಸಬೇಕೆಂದು ಆದೇಶಿಸಿದೆ.
ನಮ್ಮ ಸಮುದಾಯ ಶಿಕ್ಷಣ, ಆರ್ಥಿಕವಾಗಿ ಅತಿ ಹಿಂದುಳಿದಿದೆ. ಸರ್ಕಾರಿ ನೌಕರಿಗಳಲ್ಲಿ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿ ವರ್ಗೀಕರಿಸಬೇಕೆಂದು ಸರ್ಕಾರ ಆದೇಶಿಸುವಂತೆ ಒತ್ತಾಯಿಸಿದರು.
ಡಿಸಿ ಸಂಬಂಧಿಸಿದ ಸಚಿವಾಲಯಕ್ಕೆ ಮನವಿ ಕಳಿಸುವ ಭರವಸೆ ನೀಡಿದರು. ಸಮುದಾಯ ಪ್ರಮುಖರಾದ ಅಂದಪ್ಪ ಜವಳಿ, ಸಂಗಣ್ಣ ಟೆಂಗಿನಕಾಯಿ, ಮಲ್ಲಣ್ಣ ಪಾವಲಿ, ಶರಣಪ್ಪ ಬಳಗಾನೂರ, ಶರಣಪ್ಪ ಗದ್ದಿ, ರಾಚಪ್ಪ ಅಂಗಡಿ, ಬಸವರಾಜ ಪಗಡದಿನ್ನಿ, ಬಸವರಾಜ ಜೋಳದ, ಶಾಂತಪ್ಪ ಸೋಮಲಾಪುರ, ಪ್ರಶಾಂತ ಪ್ರಭುಶೆಟ್ಟರ, ಶಿವಕುಮಾರ ಅರಲೂರ, ಕಪ್ಪತ್ತೆಪ್ಪ ಅಂಗಡಿ, ವಿಶ್ವನಾಥ ಮಳಗಿ, ಗುರುರಾಜ ಹಲಗೇರಿ ಇತರರಿದ್ದರು.